ಗಣಪತಿ ಮೂರ್ತಿ ವಿಸರ್ಜನೆ: ಸಾರ್ವಜನಿಕರು, ಅಧಿಕಾರಿಗಳ ನಡುವೆ ವಾಗ್ವಾದ
ಕಾರವಾರ (ಕಾರವಾರ ನ್ಯೂಸ್ ವರದಿ): ‘ಇಲ್ಲಿನ ಕೋಡಿಬಾಗದ ಕಾಳಿ ನದಿ ತಟದಲ್ಲಿ ಈ ಮೊದಲಿನ ಜಾಗದಲ್ಲೇ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಬೇಕು’ ಎಂದು ಸ್ಥಳೀಯರು ಶುಕ್ರವಾರ ಪ್ರತಿಭಟನೆ ನಡೆಸಿ, ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಕೆಲಕಾಲ ಮಾತಿನ ಚಕಮಕಿ ಉಂಟಾಯಿತು.

‘ಅನೇಕ ವರ್ಷಗಳಿಂದ ಕೋಡಿಬಾಗದ ಕಾಳಿ ನದಿ ದಂಡೆಯಲ್ಲಿ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡುತ್ತಿದ್ದೆವು. ಆದರೆ ಈ ಬಾರಿ ಮೂರ್ತಿ ವಿಸರ್ಜಿಸುವ ಜಾಗದಲ್ಲಿ ಖಾಸಗಿಯವರಿಗೆ ಉದ್ಯಾನವನ್ನು ನಡೆಸಲು ನೀಡಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಬದಲಿ ಜಾಗ ಕಲ್ಪಿಸುತ್ತಿದ್ದು, ಅದು ಮಲೀನ ಪ್ರದೇಶವಾಗಿದೆ. ಅಲ್ಲಿ ಮೂರ್ತಿ ವಿಸರ್ಜನೆ ಮಾಡಲು ನಮ್ಮ ಧಾರ್ಮಿಕ ನಂಬಿಕೆ ಒಪ್ಪುವುದಿಲ್ಲ’ ಎಂದು ವಕೀಲ ನಾಗರಾಜ ನಾಯಕ ಹೇಳಿದರು.

RELATED ARTICLES  ಹದಿಹರೆಯ ವಯೋಮಾನದ ಮಕ್ಕದಲ್ಲಿ ಉಂಟಾಗುವ ತೊಂದರೆ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ

ಸ್ಥಳದಲ್ಲಿದ್ದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ‘ಕಾಳಿ ನದಿ ತಟದಲ್ಲಿ ನೂತನವಾಗಿ ಕಾಳಿ ರಿವರ್ ಗಾರ್ಡನ್ ಅನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಲ್ಲಿ ಗಣಪತಿ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗುವುದಿಲ್ಲ. ಪಕ್ಕದಲ್ಲೇ ಮಣ್ಣನ್ನು ತುಂಬಿ ಸಮತಟ್ಟುಗೊಳಿಸಿ, ವಿಸರ್ಜನೆಗಾಗಿ ವ್ಯವಸ್ಥೆ ಮಾಡಲಾಗಿದೆ. ಪಿಒಪಿ ಮೂರ್ತಿಗಳಿಗಾಗಿ ನಗರಸಭೆ ಟ್ಯಾಂಕ್‌ ಅನ್ನು ಇಟ್ಟಿದೆ. ನದಿಯಲ್ಲಿ ಕೇವಲ ಮಣ್ಣಿನ ಹಾಗೂ ನೈಸರ್ಗಿಕ ಬಣ್ಣ ಬಳಿದ ಮೂರ್ತಿಗಳಿಗೆ ಮಾತ್ರ ಅವಕಾಶ’ ಎಂದು ತಿಳಿಸಿದರು.

RELATED ARTICLES  ಯಕ್ಷ ಕಲಾ ಸೇವಕ ಮಾದೇವ ನಾಯ್ಕ ಇನ್ನಿಲ್ಲ

ಮಣಿಯದ ಜನರು ಮೊದಲಿನ ಸ್ಥಳದಲ್ಲೇ ವಿಸರ್ಜನೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಬಳಿಕ ಕೆಲ ಶರತ್ತುಗಳನ್ನು ವಿಧಿಸಿ ಕಾಳಿ ರಿವರ್ ಗಾರ್ಡನ್‌ ಒಳಗಿನ ಪ್ರದೇಶದಲ್ಲಿ ವಿಸರ್ಜನೆಗೆ ಅವಕಾಶ ನೀಡಿದರು. ಸುತ್ತಲಿನ ಪ್ರದೇಶದಲ್ಲಿ ನೂರಾರು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಯಿತು.

ಉಪ ವಿಭಾಗಾಧಿಕಾರಿ ಶಿವಾನಂದ ಕರಾಳೆ, ತಹಶೀಲ್ದಾರ್ ಜಿ.ಎನ್ ನಾಯ್ಕ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ ಬ್ಯಾಕೋಡ್, ನಗರಸಭೆ ಪೌರಾಯುಕ್ತ ಎಸ್.ಯೋಗೇಶ್ವರ, ಶಾಸಕ ಸತೀಶ್ ಸೈಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಇದ್ದರು.