ಗೋಕರ್ಣ: ಶ್ರೀರಾಮಚಂದ್ರಾಪುರ ಮಠ ಆರಂಭಿಸುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಬುಧವಾರದಿಂದ ಆರಂಭವಾಗಲಿವೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರ ಅಮೃತವಾಣಿಯೊಂದಿಗೆ ಬೆಳಿಗ್ಗೆ 11.30ಕ್ಕೆ ಆನ್‍ಲೈನ್ ತರಗತಿಗಳು ನಡೆಯಲಿವೆ.
ವಿವಿವಿ ವಿದ್ಯಾ ಪರಿಷತ್ ಮಾರ್ಗದರ್ಶನದಲ್ಲಿ ನಡೆಯುವ ಸಾರ್ವಭೌಮ ಗುರುಕುಲ ಮತ್ತು ರಾಜರಾಜೇಶ್ವರಿ ಗುರುಕುಲಗಳ ಪಾರಂಪರಿಕ ಹಾಗೂ ನವಯುಗ ಹೀಗೆ ಎರಡೂ ವಿಭಾಗಗಳ ತರಗತಿಗಳು ಆನ್‍ಲೈನ್‍ನಲ್ಲಿ ಆರಂಭವಾಗಲಿವೆ ಎಂದು ವಿದ್ಯಾ ಪರಿಷತ್ ಪ್ರಕಟಣೆ ಹೇಳಿದೆ.
ಪ್ರತಿದಿನ 30 ನಿಮಿಷಗಳ ನಾಲ್ಕು ಅವಧಿಗಳಿರುತ್ತವೆ. ಮುದ್ರಿತ ಪ್ರಸಾರ ಹಾಗೂ ನೇರ ಪ್ರಸಾರ ಹೀಗೆ ಎರಡೂ ವಿಧಾನದಲ್ಲಿ ತರಗತಿಗಳು ನಡೆಯಲಿವೆ. ಇದರೊಂದಿಗೆ ಗುರುಕುಲ ಔಪಚಾರಿಕವಾಗಿ ಆರಂಭವಾಗುವ ಮುನ್ನವೇ ವಿದ್ಯಾರ್ಥಿಗಳು ತಾವಿರುವ ಜಾಗದಿಂದಲೇ ಶ್ರೇಷ್ಠಮಟ್ಟದ ವಿದ್ಯೆ ಪಡೆಯಲು ಅವಕಾಶವಾಗಲಿದೆ ಎಂದು ಪ್ರಕಟಣೆ ಹೇಳಿದೆ.