ಭಟ್ಕಳ: ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯವಾದ ಹೆಬಳೆಯ ಶ್ರೀ ಶೇಡಬರಿ ಜಟಕಾ ಮಹಾಸತಿ ದೇವಸ್ಥಾನದಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದೆ. ದೇವಸ್ಥಾನದ ಹೊರಗಿನ ಹಿಂಬದಿಯ ಗೋಡೆಯನ್ನು ಹತ್ತಿ ಒಳನುಗ್ಗಿದ ಕಳ್ಳರು ಜಟಗ ದೇವರ ಮುಂಭಾಗದ ಸುಮಾರು 35-40 ಕೆ.ಜಿ. ತೂಕದ ಕಾಣಿಕೆ ಹುಂಡಿಯನ್ನೇ ಹೊತ್ತಯ್ದರೆ, ಮಹಾಸತಿ ದೇವಿಯರ ಮುಂದಿನ ಕಾಣಿಕೆ ಡಬ್ಬದಲ್ಲಿನ ಎಲ್ಲ ಹಣವನ್ನೂ ದೋಚಿಕೊಂಡು ಹೋಗಿದ್ದಾರೆ. ಹೊತ್ತೊಯ್ದ ಕಾಣಿಕೆ ಹುಂಡಿಯಲ್ಲಿ ಸುಮಾರು ಮುವತ್ತು ಸಾವಿರಕ್ಕೂ ಅಧಿಕ ಹಣ ಇರುವುದಾಗಿ ಅಂದಾಜಿಸಲಾಗಿದೆ. ದೇವಸ್ಥಾನದ ಒಳ ನುಗ್ಗುವಾಗ ಗೋಡೆಯನ್ನು ಹಾರಿ ಬಂದ ಕಳ್ಳರು ಹೊರ ಹೋಗುವಾಗ ಕಾಣಿಕೆಹುಂಡಿಯ ಭಾರದಿಂದಾಗಿ ಹಿಂದಿನ ದ್ವಾರದ ಬೀಗವನ್ನು ಮುರಿದು ಅದೇ ದ್ವಾರದ ಮೂಲಕ ಪರಾರಿಯಾಗಿರುವುದು ಕಂಡುಬಂದಿದೆ.

ರವಿವಾರ ಮುಂಜಾನೆ ದೇವಸ್ಥಾನದ ಪೂಜಾರಿಯವರು ನಿತ್ಯದ ಪೂಜೆಗೆಂದು ಪ್ರವೇಶದ್ವಾರದ ಬೀಗ ತೆಗೆದು ಒಳಗೆ ಹೋದಾಗ ಎದುರಿನ ಕಾಣಿಕೆಹುಂಡಿಯೂ ಇಲ್ಲದೆ, ಅದನ್ನು ಇಟ್ಟಂತಹ ಕಟ್ಟಿಗೆಯ ಪೀಠವೂ ಚೆಲ್ಲಾಪಿಲ್ಲಿಯಾಗಿದ್ದು, ಇನ್ನೊಂದು ಡಬ್ಬ ಹಾಗೂ ಹಿಂದುಗಡೆಯ ದ್ವಾರವೂ ಕೂಡ ತೆರೆದಿರುವುದನ್ನು ನೋಡಿ ಕಂಗಾಲಾಗಿ ಕೂಡಲೇ ದೇವಸ್ಥಾನದ ಕಮಿಟಿಯ ಅಧ್ಯಕ್ಷರಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ತಕ್ಷಣವೇ ಅಧ್ಯಕ್ಷರು ಬಂದು ಕಮಿಟಿಯ ಎಲ್ಲ ಸದಸ್ಯರುಗಳಿಗೆ ತಿಳಿಸಿ, ಗ್ರಾಮೀಣ ಪೋಲೀಸ್ ಠಾಣೆಯ ಅಧಿಕಾರಿಗಳಿಗೂ ದೇವಸ್ಥಾನ ಕಳ್ಳತನದ ಮಾಹಿತಿ ನೀಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಸಿ.ಪಿ.ಐ. ದಿವಾಕರ, ಪಿ.ಎಸ್.ಐ. ಭರತ್ ಹಾಗೂ ಗ್ರಾಮೀಣ ಠಾಣೆಯ ಎ.ಎಸ್.ಐ. ಮಂಜುನಾಥ ಗೌಡರ್ ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಕಳ್ಳತನವಾದ ಬಗ್ಗೆ ಪರಿಶೀಲನೆ ನಡೆಸಿದರು. ದೇವಸ್ಥಾನದ ಪಕ್ಕದಲ್ಲಿನ ಶಿಗಡಿ ಉದ್ಯಮದಲ್ಲಿರುವ ಸಿಸಿಟಿವಿ ಫುಟೇಜ್ ತಮಗೆ ನೀಡುವಂತೆ ಸೂಚಿಸಿದರು. ನಂತರ ಸಿ.ಪಿ.ಐ. ದಿವಾಕರರವರು ಮಾತನಾಡಿ ಕಾಣಿಕೆಹುಂಡಿಯನ್ನು ಹೊತ್ತೊಯ್ದು ಪರಾರಿಯಾಗಿರುವ ಕಳ್ಳರನ್ನು ಕೂಡಲೇ ಪತ್ತೆಹಚ್ಚಿ ಬಂಧಿಸುವುದಾಗಿ ಭರವಸೆ ನೀಡಿ, ಸಾರ್ವಜನಿಕರ ಸಹಕಾರವನ್ನೂ ಕೂಡ ಕೋರಿದರು.

RELATED ARTICLES  ಯಲ್ಲಾಪುರ ಪಟ್ಟಣದ ಎ.ಪಿ.ಎಂ.ಸಿ ಗೋಡಾನ್ ನಲ್ಲಿ ಬೆಂಕಿ : ಭಸ್ಮವಾಯ್ತು ಲಕ್ಷಾಂತರ ಮೌಲ್ಯದ ವಸ್ತುಗಳು

ಕಾಣಿಕೆಹುಂಡಿ ನೀರಿನಲ್ಲಿ ಪತ್ತೆ: ಕಮಿಟಿಯ ಕೆಲ ಸದಸ್ಯರು ಸಂಜೆಯವೇಳೆ ಹುಡುಕಾಟ ನಡೆಸಿದಾಗ ಕಳುವಾದ ಕಾಣಿಕೆಹುಂಡಿಯು ಕುಕ್ಕನೀರ ಹತ್ತಿರ ವೆಂಕಟಾಪುರ ನದಿಯಲ್ಲಿ ಖಾಲಿ ಡಬ್ಬದೊಂದಿಗೆ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಪತ್ತೆಯಾದ ನದಿಯ ಪಕ್ಕದ ರಸ್ತೆಯಲ್ಲಿ ಹುಂಡಿಯ ಲಾಕ್ ನ ಮುಂಭಾಗದ ಪ್ಲೇಟ್ ಹಾಗೂ ಅದರ ಬೋಲ್ಟ್ ಬಿದ್ದಿರುವುದು ಕಂಡುಬಂದಿದೆ. ಪೋಲೀಸರಿಗೆ ಮಾಹಿತಿ ತಿಳಿಸಿ ಸ್ಥಳೀಯರ ಸಹಕಾರದೊಂದಿಗೆ ನೀರಿನಲ್ಲಿ ಎಸೆದಿರುವ ಹುಂಡಿಯನ್ನು ಮೇಲಕ್ಕೆ ತೆಗೆಯಲಾಯಿತು. ಅದರಲ್ಲಿರುವ ಸಂಪೂರ್ಣ ಹಣವನ್ನು ತೆಗೆದು ಖಾಲಿ ಡಬ್ಬವನ್ನು ಮಾತ್ರ ನದಿಗೆ ಎಸೆದು ನಂತರ ಪರಾರಿಯಾಗಿರುವ ಬಗ್ಗೆ ಶಂಕಿಸಲಾಗಿದೆ.

RELATED ARTICLES  ಶಿರಸಿ : ಎಪಿಎಂಸಿ ಚುನಾವಣೆ; ನೀರಸ ಮತದಾನ

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮಂಜಪ್ಪ ನಾಯ್ಕ, ಸದಸ್ಯರುಗಳಾದ ರಾಮ ಹೆಬಳೆ, ಸುಬ್ರಾಯ ನಾಯ್ಕ, ಪರಮೇಶ್ವರ ದೇವಡಿಗ, ಶಿವರಾಮ ದೇವಡಿಗ, ಸುಬ್ರಾಯ ದೇವಡಿಗ, ಎಫ್.ಕೆ.ಮೊಗೇರ, ಹೊನ್ನಪ್ಪ ಮೊಗೇರ, ಕೇಶವ ಮೊಗೇರ, ವಿನೋದ ಪ್ರಭು, ಕಾರ್ಯದರ್ಶಿ ಈರಪ್ಪ ನಾಯ್ಕ, ಪೂಜಾರಿಯವರಾದ ಮೋಹನ ದೇವಡಿಗ, ಊರಿನ ಹಿರಿಯರು ಹಾಗೂ ಅನೇಕ ಭಕ್ತರು ಕೂಡ ಹಾಜರಿದ್ದರು.

✍️ ರಾಮ ಹೆಬಳೆ