ಕುಮಟಾ: ಹಿಂದುಳಿದ, ಗ್ರಾಮಾಂತರ ಪ್ರದೇಶದಿಂದ ಬರುವ ವಿದ್ಯಾರ್ಥಿಗಳ ಕಲಿಕಾಮಟ್ಟವನ್ನು ಎತ್ತರಿಸುವಲ್ಲಿ, ವಿಶೇಷತಃ ಎಸ್ಸೆಸ್ಸೆಲ್ಸಿ ಮಕ್ಕಳ ಪರೀಕ್ಷಾ ಫಲಿತಾಂಶವನ್ನು ಸಾಧಿಸುವಲ್ಲಿ ಆ ಮೂಲಕ ನಮ್ಮ ತಾಲೂಕಿನ ಕೀರ್ತಿಯನ್ನು ರಾಜ್ಯ ಇಲಾಖಾ ಮಟ್ಟದಲ್ಲಿ ಒಯ್ದು ನಾಮಾಂಕಿತ ಶಾಲೆಯನ್ನಾಗಿ ಮಾಡಿ, ಶಾಲೆಯ ಸರ್ವತೋಮುಖ ಉನ್ನತಿಗಾಗಿ ಶ್ರಮಿಸಿದ ಆದರ್ಶ ಮುಖ್ಯಾಧ್ಯಾಪಕ ಎನ್.ಆರ್.ಗಜು ಶಿಕ್ಷಕ ಸಮುದಾಯಕ್ಕೇ ಮಾದರಿಯಾಗಿ ನಿಲ್ಲುತ್ತಾರೆ. ವಿಜ್ಞಾನ ಶಿಕ್ಷಕರಾಗಿ ಸಾಹಿತ್ಯದೊಲುಮೆ ಹೊಂದಿರುವ ಗಜು ಇತರರು ಅನುಸರಿಸುವ ಉದಾತ್ತ ಚಿಂತನೆಗಳಿಂದ ಬಹುಕಾಲ ಪ್ರಭಾವ ಬೀರಬಲ್ಲರೆಂದೂ, ತನಗೆ ದೊರೆತ ಸೀಮಿತ ಪರಿಮಿತಿಯಲ್ಲಿಯೂ ಅದ್ವಿತೀಯ ಸಾಧನೆಗೈದ ಇವರು ಸಹಶಿಕ್ಷಕರೊಂದಿಗೆ ಹೊಂದಿರುವ ಬಾಂಧವ್ಯವೇ ಪ್ರಗತಿಗೆ ಪೂರಕವಾಗಿದೆಯೆಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ ಎನ್.ಆರ್.ಗಜು ಅವರ ಸೇವಾ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಜು ಅವರ ಸೇವಾಸಾಧನೆಗಳನ್ನು ಬಿಂಬಿಸುವ ಅವರ ಸಹೋದ್ಯೋಗಿಗಳು ಪ್ರಕಟಿಸಿದ ಗಜವದನ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಕರಾವಳಿ ಮುಂಜಾವು ಪತ್ರಿಕೆಯ ಸಂಪಾದಕ ಗಂಗಾಧರ ಹಿರೇಗುತ್ತಿ, ಪತ್ರಿಕೆಯ ಅಂಕಣಕಾರರಾದ ಗಜು ನಾನು ಕಂಡ ಶಿಕ್ಷಕರಲ್ಲಿ, ಸಾಹಿತ್ಯದ ಆರಾಧಕರ ಪೈಕಿ ಭಿನ್ನರಾದವರು. ಎರಡೂ ರಂಗದಲ್ಲಿ ಅವರಲ್ಲಿರುವ ಸಹನೆ, ವಿನಯಗಳು ಈಗಲೂ ಕಲಿಯುವ ಬುದ್ಧಿಯನ್ನು ಉಳಿಸಿದೆ. ಅವರು ನ್ಯಾಯದ ಪರ. ವೈಚಾರಿಕ ದೃಷ್ಟಿ. ಹೀಗಾಗಿ ಅವರ ಆಡಳಿತ, ಬರವಣಿಗೆ ಶುದ್ಧ. ಜೊತೆಗೆ ಅವರ ಬರವಣಿಗೆ ಆಳ ಜ್ಞಾನದ ಒಂದು ಕುಸುರಿ ಕಲಾಕೃತಿ. ಇಂದು ನಮ್ಮ ಪತ್ರಿಕೆಗೆ ಅವರ ಕುಮಟಾದ ಬಿಂಬ ಪ್ರತಿಬಿಂಬ ಅಂಕಣವೆನ್ನುವುದು ವರ್ತಮಾನದ ಉತ್ಖನನ ಎಂದು ಅಭಿಪ್ರಾಯಪಟ್ಟರು. ಪತ್ರಿಕಾ ಬರವಣಿಗೆಗೆ ಪೂರಕವಾಗಿ ಲ್ಯಾಪ್ ಟಾಪ್ ಕಾಣಿಕೆಯಾಗಿ ನೀಡುವುದಾಗಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್ಟ, ಇಲಾಖೆಗೆ ಅತ್ಯಮೂಲ್ಯ ಮಾರ್ಗದರ್ಶಕರಾದ, ಉತ್ಸಾಹಿ ಮುಖ್ಯಾಧ್ಯಾಪಕರನ್ನು ನಾವು ಮನಸ್ಸಿಲ್ಲದ ಮನಸ್ಸಿನಲ್ಲಿ ಬೀಳ್ಕೊಡಬೇಕಾಗಿದೆ. ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆಗೆ ಅವರ ಸೇವೆ ಮುಡಿಪಾಗಿರುವಂತಾಗಲಿ ಎಂದು ಆಶಿಸಿದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರೇಖಾ ನಾಯ್ಕ ಇಂತಹ ಶಿಕ್ಷಕರ ಸೇವೆ ಇಲಾಖೆಗೆ ಇನ್ನೂ ಬೇಕಿತ್ತು ಎಂದು ಅಭಿಪ್ರಾಯ ಪಟ್ಟರು. ಉದ್ಯಮಿ ಹಾಗೂ ಶಾಲಾಭಿವೃದ್ಧಿಯ ಚಿಂತಕ ಮೋಹನ ಶಾನಭಾಗ ಮಾತನಾಡಿ, ಶಾಲೆಯ ಇತಿಹಾಸದಲ್ಲಿ ಶಾಲೆಯನ್ನು ಸರ್ವಾಂಗ ಸುಂದರಗೊಳಿಸಿದ ಕೀರ್ತಿ ಗಜು ಅವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿಯೂ ಅವರು ಶಾಲೆಯೊಂದಿಗೆ ನಿಕಟ ಸಂಬಂಧ ಹೊಂದಿ ಶಾಲಾದ್ಯತೆಗೆ ಸಹಕರಿಸುತ್ತಿರಬೇಕೆಂದು ಆಗ್ರಹಿಸಿದರು.
ಗಜು ಅವರ ಕುರಿತು ವಿಶ್ರಾಂತ ಮುಖ್ಯಾಧ್ಯಾಪಕ ಮುರಲೀಧರ ಪ್ರಭು, ಪಾಂಡುರಂಗ ವಾಗ್ರೇಕರ, ಡಾ.ಪ್ರೀತಿ ಭಂಡಾರಕರ ಶುಭಹಾರೈಸಿದರೆ, ರೇವಣಕರ ಚ್ಯಾರಿಟೇಬಲ್ ಟ್ರಸ್ಟ್ ಆಡಳಿತಾಧಿಕಾರಿ ಜಯದೇವ ಬಳಗಂಡಿ, ಪತ್ರಕರ್ತ ಗಣೇಶ ಜೋಶಿ, ಎಂ.ಜಿ.ನಾಯ್ಕ, ಮೀನುಗಾರ ಸಂಘದ ಅಧ್ಯಕ್ಷ ಜೈವಿಠ್ಠಲ ಕುಬಾಲ, ರೋಟರಿಯ ಅರುಣ ಉಭಯಕರ, ಸುರೇಶ ಭಟ್ಟ, ಕಿರಣ ನಾಯಕ, ಮಂಜು ಗಾವಂಕರ ಬರ್ಗಿ, ಎಂ.ಎಂ.ನಾಯ್ಕ, ಡಾ.ಶ್ರೀಧರ ಗೌಡ, ಕರಾಟೆ ಗುರು ಅರವಿಂದ ನಾಯ್ಕ, ಎಸ್.ಎಸ್.ಭಟ್ಟ ಲೋಕೇಶ್ವರ, ರೋಟರಿ ಅಧ್ಯಕ್ಷ ಶಶಿಕಾಂತ ಕೋಲೇಕರ, ಖಜಾನಾಧಿಕಾರಿ ಬಿ.ಡಿ.ನಾಯ್ಕ, ಶಿಕ್ಷಣ ಸಂಯೋಜಕಿ ಜಯಶ್ರೀ ಎ.ಪಿ, ವಕೀಲ ವಿವೇಕ ಭಂಡಾರಿ, ಡಾ.ರವಿರಾಜ ಕಡ್ಲೆ, ಪ್ರಣೀತ ಕಡ್ಲೆ, ಸಾತ್ವಿಕ ಭಟ್ಟ, ಸೆಕೆಂಡರಿ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್.ನಾಯ್ಕ, ಸಿಎ ವಿನಾಯಕ ಭಟ್ಟ, ಮೊದಲಾದವರು ಅಭಿನಂದಿಸಿದರು. ಸಂಪಾದಕ ಸುರೇಶ ಪೈ, ಗಜು ಅವರ ತಂದೆ ಈಶ್ವರ ನಾಯ್ಕರನ್ನು ಸನ್ಮಾನಿಸಲಾಯಿತು. ಗಜು ಕುಟುಂಬದ ಸಹೋದರಿ ಎಂ.ಕೆ.ಲಕ್ಷ್ಮಿ, ಮೋಹನ ನಾಯ್ಕ, ವಾಮನಕುಮಾರ ನಾಯ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಜು ದಂಪತಿಯನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಗಜು ಅವರು ತನ್ನ ಸೇವಾವಧಿಯಲ್ಲಿ ಸಹಕಾರ ನೀಡಿದ ಊರ ನಾಗರಿಕರನ್ನು, ದಾನಿಗಳನ್ನು, ಗಣ್ಯರನ್ನು ಸ್ಮರಿಸಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಾರಂಭದಲ್ಲಿ ದೀಪಾ ಭಟ್ಟ ದ್ವಯರಿಂದ ಪ್ರಾರ್ಥನೆ ನಡೆಯಿತು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ, ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರು. ಗಜವದನ ಸಂಪಾದಕ ಸುರೇಶ ಪೈ ಗ್ರಂಥದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಶಿಕ್ಷಕ ವಿ.ಎನ್.ಭಟ್ಟ ಸನ್ಮಾನ ಕಾರ್ಯಕ್ರಮ ನಿರೂಪಿಸಿದರೆ, ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ಪ್ರದೀಪ ನಾಯಕ ವಂದಿಸಿದರು.