ಶಿರಸಿ: ಶ್ರೀದೇವಿ ಸಂಯುಕ್ತ ಪದವಿಪೂರ್ವ ಕಾಲೇಜು, ಅಂಕುರ ಸಾಹಿತ್ಯ ವೇದಿಕೆ ವತಿಯಿಂದ, ಮಮತಾ ಟ್ರಸ್ಟ್ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಕವನ ರಚನೆ ಸ್ಪರ್ಧೆಯನ್ನು ಏರ್ಪಡಿಸಿದೆ.
ಅಂಕುರ ಸಾಹಿತ್ಯ ವೇದಿಕೆಯ ಮೂಲಕ ಪದವಿ ಪೂರ್ವ ವಿದ್ಯಾರ್ಥಿಗಳ ಕಾವ್ಯ ಪ್ರತಿಭೆಯನ್ನು ಗುರುತಿಸಿ ಕಾವ್ಯ ಕಮ್ಮಟಗಳ ಮೂಲಕ ಪ್ರೋತ್ಸಾಹ ನೀಡುತ್ತಾ ಅವರ ರಚನೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಾ ಬಂಂದು, ಇದೀಗ ಎಂಟನೆಯ ವರ್ಷದಲ್ಲಿ ಮುಂದಡಿಯಿಟ್ಟಿದೆ. ಈ ವರ್ಷ ಈಗ ಮತ್ತೆ ಸ್ಪರ್ಧೆ ಆಯೋಜನೆ ಮಾಡಿದ್ದು, ಸಧ್ಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದು ಪಿಯುಸಿ ಪ್ರವೇಶದ ನಿರೀಕ್ಷೆಯಲ್ಲಿ ಇರುವ ಹಾಗೂ ಪ್ರಥಮ ಪಿಯುಸಿ ಉತ್ತೀರ್ಣರಾದ ಉತ್ತರಕನ್ನಡಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
ಕವನ ರಚನೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ತಮ್ಮದೇ ಕೈಬರಹದಲ್ಲಿ ಇರುವ ಸ್ವರಚಿತ ಎರಡು ಕವನಗಳನ್ನು ತಮ್ಮ ಯಾರಾದರೂ ಒಬ್ಬರು ಶಿಕ್ಷಕರ ಸಹಿ, ವಿಳಾಸ, ಅನುಮೋದನೆ ಸಹಿತ ಅಂಚೆ ಮೂಲಕ ಅ. 15 ರೊಳಗಾಗಿ ತಪ್ಪದೇ ವಿದ್ಯಾರ್ಥಿಯ ವಿಳಾಸ ನಮೂದಿ ಕಳಿಸಬೇಕು.
ಸ್ಪರ್ಧೆಯು ಎರಡು ಹಂತದಲ್ಲಿ ನಡೆಯಲಿದೆ. ಅಂದರೆ ಜಿಲ್ಲೆಯ ಒಬ್ಬರು ಹಿರಿಯ ಕವಿಗಳಿಂದ ಮೌಲ್ಯಮಾಪನ ಮತ್ತು ಮಾರ್ಗದರ್ಶನ ಮಾಡಲಾಗುತ್ತದೆ. ವಿಜೇತರಿಗೆ ಸ್ಥಳೀಯ ಸಾಹಿತಿಗಳು ಬರೆದ ಕವನ ಸಂಕಲನಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕಾವ್ಯಾಂಕುರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿದೆ. ಉಳಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ಮತ್ತು ಅವರ ರಚನೆಗಳನ್ನು ಒಳಗೊಂಡ ಈವರ್ಷದ ‘ಅಂಕುರ’ ಕವನ ಸಂಕಲನವನ್ನು ನೀಡಲಾಗುವುದು. ಇನ್ನೂ ಹೆಚ್ಚಿನ ವಿವಿರಗಳಿಗೆ ಅಂಕುರ ಸಾಹಿತ್ಯ ವೇದಿಕೆ ಸಂಚಾಲಕ ಮೋಹನ ಭರಣಿ 6363111581 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.