ಹೊನ್ನಾವರ: ತಾಲೂಕಿನ ಬಡಗಣಿ ನದಿ ಉಕ್ಕಿ ಹರಿದ ಪರಿಣಾಮವಾಗಿ ಕಡತೊಕಾ, ನವಿಲಗೊಣ, ಹಳದಿಪುರ, ಕರ್ಕಿ ಪಂಚಾಯತ ವ್ಯಾಪ್ತಿಯ ತಗ್ಗು ಪ್ರದೇಶಗಳ ನೂರಾರು ಮನೆಗಳು ಜಲವ್ರತವಾಗಿವೆ.
ಭಾರೀ ಮಳೆಯಿಂದಾಗಿ ಬಡಗಣಿ ನದಿ ಉಕ್ಕಿ ಹರಿದಿದ್ದು ಕಡತೊಕಾದ ಗುಡ್ಡಿನಕಟ್ಟು ಹೆಬಳೆಕೊಪ್ಪ ಕೆಕ್ಕಾರದ ಹೂಜಿಮುರಿ ಲಕ್ಕುಮನೆಕೆರಿ ಮೂಲೆಗದ್ದೆ, ಕೆಳಗಿನಕೇರಿ ನವಿಲಗೊಣದ ಬುಗ್ರಿಹಿತ್ಲು, ಮುಂಡಿಕೊಡಿ ಹಳದಿಪುರದ ಕಲ್ಕಟ್ಟಿ, ಕಂಟಂಚಿ, ಮಣ್ಣಗದ್ದೆ, ಗುಬ್ಬಣಿ, ತಾರಿಹೊಳೆ, ಹಬ್ಬುಗದ್ದೆ, ಕೋಡಿಚಿಟ್ಟೆ ಕರ್ಕಿಯ ಕೋಣ್ಕಾರ್ ಮುಂತಾದ ಭಾಗಗಳಲ್ಲಿ ನೂರಾರು ಮನೆಗಳು ಜಲವ್ರತವಾಗಿದ್ದು ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಅಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಸಲಾಗುತ್ತಿದೆ. ಹಳದಿಪುರ ಚಿಪ್ಪಿಹಕ್ಕಲ್ ರಸ್ತೆ ಸಂಪರ್ಕ ಕಡಿತಗೊಂಡಿದ್ದು ಹೆಬಳೆ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ.
ಸ್ಥಳೀಯ ಜಿಲ್ಲಾ ಪಂಚಾಯತ ಸದಸ್ಯ ಶಿವಾನಂದ ಹೆಗಡೆ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮನೆಗಳಿಂದ ಕಾಳಜಿ ಕೇಂದ್ರಗಳಿಗೆ ಜನರನ್ನು ಸ್ಥಳಾಂತರಿಸುವಲ್ಲಿ ನಿರತರಾಗಿದ್ದಾರೆ. ಹೊನ್ನಾವರ ತಹಶೀಲ್ದಾರ್ ತೀವ್ರ ನಿಗಾ ವಹಿಸಿದ್ದು, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಯೋಗಾನಂದ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಜಿ ಎಲ್ ನಾಯ್ಕ್, ಬಾಲಕೃಷ್ಣ ನಾಯ್ಕ್, ಕಿರಣ ಎಂ ಜಿ, ಗ್ರಾಮ ಲೆಕ್ಕಾಧಿಕಾರಿ ಅಸ್ಲಾಮ್ ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಕಾಳಜಿ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.
ತಾಲೂಕಾ ಪಂಚಾಯತ ಸದಸ್ಯೆ ರೂಪಾ ಗೌಡ ಸ್ಥಳೀಯರಾದ ನಾರಣಪ್ಪ ಗೌಡ, ಹೊಸಬು ಗೌಡ, ಶ್ರೀನಾಥ್ ಶೆಟ್ಟಿ, ಕಿರಣ್ ಭಂಡಾರಿ, ಎಲ್ ಎನ್ ಭಟ್ಟ, ಬಾಲು ಭಂಡಾರಿ, ರಾಮಚಂದ್ರ ನಾಯ್ಕ, ಶ್ರೀಮತಿ ಗೌರಿ ನಾಯ್ಕ್ ಸದಾನಂದ ನಾಯ್ಕ್ ರಾಜು ನಾಯ್ಕ್, ಶ್ರೀಕಾಂತ ನಾಯ್ಕ್, ಶಿವರಾಂ ಮಡಿವಾಳ, ಮಂಜುನಾಥ ನಾಯ್ಕ್, ಎಂ ಎಸ್ ಹೆಗಡೆ ಮುಂತಾದವರು ಜನರನ್ನು ಸ್ಥಳಾಂತರಿಸುವಲ್ಲಿ ಸಹಕರಿಸುತ್ತಿದ್ದಾರೆ.