ಹೊನ್ನಾವರ: ಗೋ ಕಳ್ಳತನದ ಜಾಲ ಎಲ್ಲೆಲ್ಲಿ ಹರಡಿದೆ ಎಂಬುದೇ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಕಾರಿನಲ್ಲಿ ಗೋಗಳ ಅಕ್ರಮ ಸಾಗಾಟ ಬಯಲಾಗಿರುವುದು ಜನತೆಯಲ್ಲಿ ಆಶ್ಚರ್ಯ ಮೂಡಿಸಿದೆ.
ಹೊನ್ನಾವರದ ಗೇರುಸೊಪ್ಪದ ಬಳಿ ಸ್ವಿಫ್ಟ್ ಮತ್ತು ಎರ್ಟಿಗಾ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಇದೇ ವೇಳೆ ಸ್ವಿಫ್ಟ್ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಎರ್ಟಿಗಾ ಕಾರು ಹೊನ್ನಾವರದಿಂದ ಗೇರುಸೊಪ್ಪ ಮಾರ್ಗದಲ್ಲಿ ಹೋಗುತ್ತಿರುವಾಗ, ಮಾವಿನಗುಂಡಿಯಿಂದ ಹೊನ್ನಾವರ ಮಾರ್ಗವಾಗಿ ಬರುತ್ತಿದ್ದ ಸ್ವಿಫ್ಟ್ ಕಾರಿನ ಚಾಲಕನ ಅಜಾಗರೂಕತೆ ಚಾಲನೆಯಿಂದ ಡಿಕ್ಕಿ ಸಂಭವಿಸಿದೆ. ರಕ್ಷಣೆಗಾಗಿ ಸ್ಥಳೀಯರು ಧಾವಿಸಿದಾಗ ಸ್ವಿಫ್ಟ್ ಕಾರಿನಲ್ಲಿ ಗೋ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ.
ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು ಸಾಗರದಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದು, ಒಂದು ಗೋವು ಮೃತಪಟ್ಟಿದೆ. ವಾಹನದಲ್ಲಿ ಮೂವರು ಆರೋಪಿಗಳಿದ್ದು, ಇಬ್ಬರು ಅಫಘಾತವಾದ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.