ಗೋಕರ್ಣ : ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಪೂಜಾಧಿಕಾರಕ್ಕೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯವು (ಧಾರವಾಡ ಪೀಠ) ಇಂದು ಮಹತ್ತರವಾದ ಆದೇಶವನ್ನು ನೀಡಿದ್ದು, ಶ್ರೀರಾಮಚಂದ್ರಾಪುರಮಠದ ಮೇಲ್ಮನವಿಯನ್ನು ಮಾನ್ಯಮಾಡಿ; ಪ್ರತಿವಾದಿಗಳು ತಮಗೆ ಪೂಜಾಧಿಕಾರ ನೀಡುವಂತೆ ಮಾಡಿದ್ದ ಮನವಿಗಳನ್ನು ತಿರಸ್ಕರಿಸಿದೆ. ಶ್ರೀಮಠದ ಮೇಲ್ಮನವಿಯನ್ನು ಮಾನ್ಯ ಮಾಡಿರುವುದು ದೇವಾಲಯದ ಆಡಳಿತಕ್ಕೆ ಮಹತ್ವದ ಗೆಲುವಾಗಿದ್ದು, ದೇವಾಲಯದ ದಕ್ಷ ನಿರ್ವಹಣಾ ವ್ಯವಸ್ಥೆಯನ್ನು ನ್ಯಾಯಾಲಯವು ಮಾನ್ಯ ಮಾಡಿದಂತಾಗಿದೆ.
ಶ್ರೀರಾಮಚಂದ್ರಾಪುರಮಠದ ಆಡಳಿತವು ರೂಪಿಸಿರುವ ನಿಯಮಗಳನ್ನು ಪಾಲಿಸಲು ಬದ್ಧರಾಗದ ತಮಗೆ ಪೂಜಾಧಿಕಾರ ಹಾಗೂ ದಕ್ಷಿಣೆ ಸ್ವೀಕರಿಸಲು ಅವಕಾಶವನ್ನು ಕಲ್ಪಿಸಬೇಕಾಗಿ ಅನಂತ ದತ್ತಾತ್ರೇಯ ಅಡಿ ಹಾಗೂ ಇನ್ನಿತರ 24 ಮಂದಿ ಅರ್ಜಿಯನ್ನು ಸಲ್ಲಿಸಿದ್ದರು. ಆಡಳಿತದ ನಿಬಂಧನೆಗೆ ಒಳಪಡದೇ ಇರುವವರಿಗೆ ಪೂಜಾಧಿಕಾರವನ್ನು ನೀಡಿದರೆ ಅರಾಜಕತೆ ಉಂಟಾಗಲಿದೆ ಹಾಗೂ ಈಗಾಗಲೇ ನಿಬಂಧನೆಗಳಿಗೆ ಒಳಪಟ್ಟು ಹಲವಾರು ವರ್ಷಗಳಿಂದ ಪೂಜೆ ಮಾಡಿಸುತ್ತಿರುವ ಅರ್ಚಕರುಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ದೇವಾಲಯದ ಆಡಳಿತವು ಪ್ರತಿವಾದವನ್ನು ದಾಖಲಿಸಿತ್ತು.
ಕಳೆದ ಆರೇಳು ವರ್ಷಗಳಿಂದ ವಿವಿಧ ನ್ಯಾಯಾಲಯಗಳಲ್ಲಿ ಈ ಪ್ರಕರಣದ ಕುರಿತು ವಾದ – ಪ್ರತಿವಾದಗಳು ನಡೆದಿದ್ದು, ಈ ಹಿಂದೆ ಜಿಲ್ಲಾ ನ್ಯಾಯಾಲಯವು ವಾದಿಗಳ ಅಹವಾಲನ್ನು ಭಾಗಶಃ ಒಪ್ಪಿ, ಪೂಜೆ ಮಾಡಲು ಅವಕಾಶ ಕಲ್ಪಿಸಿತ್ತು. ಆಗ ದೇವಾಲಯದ ಆವರಣದಲ್ಲಿ ಆಶಾಂತಿಯನ್ನು ಸೃಷ್ಟಿಸಲು ವಾದಿಗಳು ಪ್ರಯತ್ನಿಸಿದ್ದರು.
ಇದೀಗ ಶ್ರೀಮಠದ ಆಡಳಿತ ಹಾಗೂ ಉಪಾದಿವಂತ ಮಂಡಲಗಳು ಮಾಡಿದ್ದ ಮನವಿಯನ್ನು ಪುರಸ್ಕರಿಸುವುದರ ಜೊತೆಗೆ, ಜಿಲ್ಲಾ ನ್ಯಾಯಾಲಯದ ಆದೇಶವನ್ನು ವಜಾಗೊಳಿಸುವುದರ ಜೊತೆಗೆ, ವಾದಿಗಳು ಸಲ್ಲಿಸಿದ್ದ ತಾತ್ಕಾಲಿಕ ಅರ್ಜಿಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಶ್ರೀರಾಮಚಂದ್ರಾಪುರಮಠವು ಮಹಾಬಲೇಶ್ವರ ದೇವಾಲಯದ ಆಡಳಿತ ವಹಿಸಿಕೊಡ ನಂತರ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದು, ಆಡಳಿತ ನಿರ್ವಹಣಾ ವ್ಯವಸ್ಥೆಯ ದಕ್ಷತೆಗಾಗಿ ಅಂತಾರಾಷ್ಟ್ರೀಯ ISO Certificate ಅನ್ನು ಪಡೆದಿದೆ. ಆದರೆ ಗೋಕರ್ಣದ ಅಭಿವೃದ್ಧಿ ಸಹಿಸದ ಕೆಲವರು ಆಡಳಿತಕ್ಕೆ ಸದಾ ತೊಂದರೆಗಳನ್ನೇ ನೀಡುತ್ತಾ ಬಂದಿದ್ದಾರೆ. ದೇವಾಲಯದ ಆಡಳಿತವು ರೂಪಿಸಿರುವ ನಿಯಮಗಳನ್ನು ಧಿಕ್ಕರಿಸಿ; ತಮ್ಮ ಸ್ವೇಚ್ಚೆಯಂತೆ ಭಕ್ತರಿಂದ ದಕ್ಷಿಣೆ ಸ್ವೀಕರಿಸಲು ಹಾಗೂ ಪೂಜೆ ನೆರವೇರಿಸಲು ಇವರು ಪ್ರಯತ್ನ ಪಟ್ಟಿದ್ದರು. ಆಡಳಿತ ರೂಪಿಸುವ ಶಿಸ್ತಿಗೆ ಬದ್ಧರಾದವರಿಗಷ್ಟೇ ಪೂಜೆಯನ್ನು ನಡೆಸಲು ಅವಕಾಶ ನೀಡುವುದಾಗಿ ಶ್ರೀಮಠದ ಆಡಳಿತ ಪ್ರತಿಪಾದಿಸುತ್ತಾ ಬಂದಿತ್ತು. ಇದೀಗ ಉಚ್ಚ ನ್ಯಾಯಾಲಯವು ಶ್ರೀಮಠದ ಮೇಲ್ಮನವಿಯನ್ನು ಮಾನ್ಯ ಮಾಡಿರುವುದು ದೇವಾಲಯದ ಆಡಳಿತಕ್ಕೆ ಮಹತ್ವದ ಗೆಲುವಾಗಿದ್ದು, ದೇವಾಲಯದ ದಕ್ಷ ನಿರ್ವಹಾ ವ್ಯವಸ್ಥೆಯನ್ನು ನ್ಯಾಯಾಲಯವು ಮಾನ್ಯ ಮಾಡಿದಂತಾಗಿದೆ.