ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಶ್ರೀ ವಿ.ಎನ್.ಭಟ್ಟ – ನವಿಲಗೋಣ

ಇಂದಿಗಿಂದಿಗೆ ಎನ್ನುವವರು ಹಲವರು. ಅವರ ವ್ಯವಹಾರ ಇಂದಿಗಷ್ಟೇ ಸೀಮಿತ. ಲಾಭವೋ ನಷ್ಟವೋ ನಾಳೆ ಅವರು ನಮಗೆ ಸಂಬಂಧವಿಲ್ಲದ ಜನ. ನಾಳೆಯನ್ನಷ್ಟೇ ನೋಡುವ ಕೆಲವು ಜನರಿದ್ದಾರೆ. ಇಂದು ಉಪಕಾರಿಸಿದವನಿಗೆ ನಾಳೆಯೇ ನಾನೂ ಏನಾದರೂ ಮಾಡಿ ಬಿಡಬೇಕು ಎನ್ನುವ ಜನ ಇವರು. ನಾಲ್ಕು ದಿನ ಕಳೆದರೆ ಅವರಿಗೆ ಮತ್ತೆ ಮರೆತು ಹೋಗುತ್ತದೆ. ಹೀಗಾಗಿ ಅವರು ಇಂದಿನ ಋಣವನ್ನು ನಾಳೆಯೇ ತೀರಿಸಿ ಬಿಡುತ್ತಾರೆ. ಅವರದ್ದು ಸಮೀಪ ದೃಷ್ಟಿ ನಾಳೆಗಿಂತ ಮುಂದೆ ಅವರಿಗೆ ಕಾಣುವುದಿಲ್ಲ. ಕೆಲವರು ಮಾತ್ರ ದಿನಗಳಲ್ಲ ವರ್ಷಗಳ ನಂತರದ್ದನ್ನೂ ಯೋಚನೆ ಮಾಡುವವರು. ದೂರದೃಷ್ಟಿ ಉಳ್ಳವರು. ವರುಷ ವರುಷ ಕಳೆದರೂ ಅವರು ನೆನಪಿನಿಂದ ಮರೆಯಾಗುವುದಿಲ್ಲ….ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಭವಿಷ್ಯವನ್ನೂ ಬಹುವಾಗಿ ಚಿಂತಿಸಿ ಹೆಜ್ಜೆಯಿಡುತ್ತಾರೆ. ವಿದ್ಯಾರ್ಥಿಗಳ ಸುಂದರ ಭವಿಷ್ಯಕ್ಕೆ ಕಾರಣರಾದ ನಮ್ಮ ನೆಚ್ಚಿನ ಶ್ರೀಯುತ ವಿ.ಎನ್ ಭಟ್ಟ ಸರ್ ನನ್ನ ಇಂದಿನ ಅಕ್ಷರ ಅತಿಥಿ.
ಶ್ರೀ ಕರಿಕಾನ ಪರಮೇಶ್ವರಿ ಪದವಿ ಪೂರ್ವ ಮಹಾ ವಿದ್ಯಾಲಯ ಅರೆಅಂಗಡಿಯ ಪ್ರಾಂಶುಪಾಲರಾಗಿರುವ ಶ್ರೀಯುತ ವಿ.ಎನ್.ಭಟ್ಟ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ನವಿಲಗೋಣದವರು. ಸಂಸ್ಕೃತ ಎಂ ಎ ಪದವೀಧರರಾದ ಶ್ರೀಯುತರು ನನ್ನ ಕಾಲೇಜಿನ ಸಂಸ್ಕೃತ ಗುರುಗಳು. ಅವರೇ ಸುಸಂಸ್ಕೃತ ಜನರಾದ್ದರಿಂದ ನಮಗೆ ಅವರ ನಡೆ ನುಡಿಯೇ ಹೆಚ್ಚು ಪ್ರಭಾವ ಬೀರಿದ್ದು. ನಿಧಾನ ನಡಿಗೆ, ಹಾಸ್ಯ ಮನೋಭಾವ, ಅದ್ಭುತ ಸ್ಮರಣ ಶಕ್ತಿ, ವಿದ್ಯಾರ್ಥಿಗಳಲ್ಲಿ ಅಂತಃ ಸ್ಥೈರ್ಯ ತುಂಬುವ ಅವರ ವ್ಯಕ್ತಿತ್ವ ಅನನ್ಯವಾದದ್ದು. ವಿ.ಎನ್ ಭಟ್ಟರು ನನ್ನ ಅಚ್ಚುಮೆಚ್ಚಿನ ಗುರುಗಳಲ್ಲಿ ಒಬ್ಬರು.
ಕಾಲೇಜಿನ ದಿನಗಳಲ್ಲಿ ಸಂಸ್ಕೃತ ವಿಷಯವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಸ್ವಲ್ಪ ಕಡಿಮೆಯಿತ್ತು. ಆದರೆ ಸಂಸ್ಕೃತ ಭಾಷೆ ನಮಗೆ ತುಂಬಾ ಅಂಕಗಳ ಜೊತೆಗೆ ವ್ಯಕ್ತಿತ್ವ ಸುಧಾರಣೆಗೂ ಭದ್ರ ಅಡಿಪಾಯ ಹಾಕಿಕೊಡುತ್ತಿತ್ತು. ಸಂಸ್ಕೃತ ಸಾಹಿತ್ಯ ವಿಶ್ವದಲ್ಲೇ ಅದ್ಭುತವಾದದ್ದು. ಕಾಳಿದಾಸ, ಭಾಸ, ಭರ್ತಹರಿ ಒಬ್ಬರಾ ಇಬ್ಬರಾ ಸಹಸ್ರ ಸಹಸ್ರ ಜನ ಕವಿ ಕೋವಿದರ ಕೃತಿಗಳನ್ನು ಆಸ್ವಾದಿಸುವುದೆಂದರೆ ಅದು ಹಬ್ಬ. ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು, ವೇದಗಳು, ಪುರಾಣಗಳು, ಉಪನಿಷತ್ತುಗಳು, ಭಗವದ್ಗೀತೆ, ನೀತಿಶತಕ, ಹಿತೋಪದೇಶ ಕಥೆಗಳು, ಹೀಗೆ ರಸಾಸ್ವಾದನೆಯ ಸಂಪೂರ್ಣ ಅವಕಾಶ ಸಂಸ್ಕೃತದಲ್ಲಿ ನಮಗೆ ಸಿಗುವಂತಾಯ್ತು. ವಿ.ಎನ್. ಭಟ್ಟ ಸರ್ ನಮಗೆ ಕಾಳಿದಾಸನ ಅಭಿಜ್ಞಾನ ಶಾಕುಂತಲ, ಮೇಘದೂತ ಮುಂತಾದ ನಾಟಕಗಳನ್ನು ವಿವರಿಸುತ್ತಿದ್ದರೆ ನನಗೆ ಅವಧಿ ಮುಗಿದದ್ದೇ ತಿಳಿಯುತ್ತಿರಲಿಲ್ಲ. ಅಷ್ಟು ಸ್ಪಷ್ಟವಾಗಿ ವೈಶಿಷ್ಟ್ಯವಾಗಿ ಅವರು ವಿವರಿಸುತ್ತಿದ್ದರು.
ವಿ.ಎನ್.ಭಟ್ಟ ಸರ್ ಬಹಳ ಶಿಸ್ತಿನ ಮನುಷ್ಯರು. ಅವರ ಬೈಕು, ಮುಖ ಕಾಣದ ಹೆಲ್ಮೇಟು, ಹಾಕುವ ಬಟ್ಟೆ, ಚಪ್ಪಲಿ, ಕಾಲಬೆರಳಿನ ಉಗುರುಗಳೂ full clean ಆಗಿರುತ್ತಿದ್ದವು. ? ಅವರು ತರಗತಿಗೆ ಬಂದವರೇ ಇಷ್ಟವಿದ್ದವರು ಮಾತ್ರ ಕುಳಿತುಕೊಳ್ಳಿ ಉಳಿದವರು ಹೋಗಬಹುದು ಧಾರಾಳವಾಗಿ ಎಂದು ಬಿಡುತ್ತಿದ್ದರು. ಹೀಗಾಗಿ ಇಷ್ಟವಿಲ್ಲದೇ ಕ್ಲಾಸಿನಲ್ಲಿ ಗಲಾಟೆ ಹೊಡಯುವವರೆಲ್ಲಾ‌ ಎದ್ದು ಹೋದ ಮೇಲೆ ಅತ್ಯಂತ ಸಂತೋಷದಿಂದ ನಮಗೆ ಪಾಠ ಮಾಡುತ್ತಿದ್ದರು. ಅವರ ಒಂದು ವಿಶೇಷತೆಯೆಂದರೆ ನಮ್ಮ ಕಾಲೇಜಿನಲ್ಲಿ ಪ್ರತಿ ತರಗತಿಯಲ್ಲಿ100 ಜನ ವಿದ್ಯಾರ್ಥಿಗಳು ಇದ್ದರೂ ಅವರಿಗೆ ಬಹುತೇಕರ Roll number ನೆನಪಿರುತ್ತಿತ್ತು…..ಮತ್ತು ಅವರಿಗೆ ಹೆಸರು ಕರೆದು ಅಭ್ಯಾಸವಿರಲಿಲ್ಲ….Roll number ಹೇಳಿಯೇ ಅಭ್ಯಾಸ. ನನಗೆ ಅವರು ಈಗಲು ಸಿಕ್ಕಾಗಲೂ Roll number 85 ಎಂದು ಕರೆದ ಹಾಗೆ ಭಾಸವಾಗುತ್ತದೆ. ? ಅವರು ಹೇಳಿಕೊಟ್ಟ ಸುಭಾಷಿತಗಳನ್ನು ನಾನು ತಪ್ಪದೇ ಕಂಠಸ್ಥಗೊಳಿಸಿ ಒಪ್ಪಿಸುತ್ತಿದ್ದೆ. ಅವರ home work ಗಳನ್ನು ಒಂದು ದಿನವೂ ತಪ್ಪಿಸಿದ್ದಿಲ್ಲ ನಾನು. ಅಷ್ಟು ಶೃದ್ಧಾ ಭಕ್ತಿಯಿಂದ ಅವರನ್ನೂ ಅವರು ಭೋದಿಸುವ ವಿಷಯವನ್ನೂ ಪ್ರೀತಿಸುತ್ತಿದ್ದುರಿಂದಲೇ ಭಗವಂತ ಇಷ್ಟಾದರೂ ಬರೆಯುವ ಶಕ್ತಿ ಕೊಟ್ಟ.
ವಿ.ಎನ್.ಭಟ್ಟರು ಬಹಳ ತಮಾಷೆಯ ವ್ಯಕ್ತಿ. ಅವರ ಸಹೋದ್ಯೋಗಿಗಳ ಜೊತೆಗೆ ಇರುವಾಗ ಅವರು ನಗುನಗುತ್ತಲೇ ಇಡೀ ದಿನ ಕಳೆಯುತ್ತಾರೆ. ವಿದ್ಯಾರ್ಥಿಗಳ ಮುಂದೆ ನಿಂತಾಗ ಮಾತ್ರ ಅವರ serious ಮುಖ ದರ್ಶನ ಆಗುತ್ತಿತ್ತು. ಅವರು ಹಾಗೆ ತನಗೆ ತಾನೇ ಗಂಭೀರವಾಗುವುದನ್ನು ಆರೋಪಿಸಿಕೊಳ್ಳುವಾಗ ನನಗೆ ತಡೆಯಲಾರದ ನಗು ಬರುತ್ತಿತ್ತು.
ವಿ.ಎನ್.ಭಟ್ಟರ ಸಂಸ್ಕೃತ ಪಟ್ಟಿ 20 ವರ್ಷಗಳಾದರೂ ಇಂದಿಗೂ ನನ್ನ ಬಳಿ ಇದೆ. ಅಷ್ಟು ಖುಷಿ ನನಗೆ ಅದು. ಪ್ರತಿಭಾ ಸಂಪನ್ನ ಮಕ್ಕಳು, ಸಾಧ್ವಿ ಮಡದಿ, ಸಂಪ್ರದಾಯಸ್ಥ ತುಂಬು ಕುಟುಂಬ ಹೃದಯ ಶ್ರೀಮಂತಿಕೆಯ ಯಜಮಾನರು ನಮ್ಮ ಸರ್. ಪ್ರಾಂಶುಪಾಲರಾಗಿಯೂ ಗರ್ವ ತೋರದ ಸಜ್ಜನರು. ಅವರಿಂದ ಕಲಿತ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ನೆಲೆಸಿ ಬದುಕು ಕಂಡು ಕೊಂಡಿದ್ದಾರೆ. ಅವರ ಸರಳ ತಮಾಷೆಗಳು ಕ್ಲಾಸನ್ನು ಲೈವ್ ಆಗಿ ಇಡುತ್ತಿದ್ದವು.
ಅವರು ಒಂದೇ ಒಂದು ದಿನ ನನ್ನನ್ನು ಗದರಿದ್ದಿಲ್ಲ. ಕಣ್ಣು ದೊಡ್ಡ ಮಾಡಿದ್ದಿಲ್ಲ. ಈಗಲೂ ಸಿಕ್ಕಾಗೆಲ್ಲ ಸಂದೀಪ ನೀನು ಆರಿಸಿಕೊಂಡ ಉದ್ಯೋಗಕ್ಕಿಂತ ನಿನಗೆ ಉನ್ನತ ಉದ್ಯೋಗ ಸಿಗಬೇಕಿತ್ತು ಎಂದು ವ್ಯಥೆ ಪಡುತ್ತಾರೆ. ನಮ್ಮ ಬಡತನಕ್ಕೆ ಆಗ ಅದು ನನಗೆ ಸಾಕಾಗಿತ್ತು. ಆದರೆ ಈಗ ಬರವಣಿಗೆಯ ಮೂಲಕವಾದರೂ ನಾಲ್ಕಾರು ಜನಕ್ಕೆ ಪರಿಚಿತವಾದದ್ದಾದರೆ ಅದಕ್ಕೆ ವಿ.ಎನ್.ಭಟ್ಟ ಸರ್ ನನ್ನ ಮೇಲೆ ಬೀರಿದ ಪ್ರಭಾವವೂ ಪರೋಕ್ಷ ಕಾರಣ.
ನಾನು ಕಾಲೇಜಿನಲ್ಲಿ ಯಾವಾಗಲೂ ಮೊದಲ ಡೆಸ್ಕಿನ ಮೂಲೆಯಲ್ಲಿ ಕುಳಿತುಕೊಳ್ಳುತ್ತಿದ್ದೆ. ವಿ.ಎನ್.ಭಟ್ಟ ಸರ್ ಬಹುತೇಕ ನನ್ನೆದುರು ನಿಂತು ಪಾಠ ಮಾಡಿದ್ದೇ ಹೆಚ್ಚು. ಅವರು ಪಾಠ ಮಾಡುತ್ತಿದ್ದಾಗ ನಾನು ಅರ್ಜುನನೇ ಆಗಿ ಇರುವಂತೆ ಅವರು ಗೀತೋಪದೇಶ ಮಾಡುತ್ತಿರುವ ಕೃಷ್ಣನೇ ಆದಂತೆ ಭಾಸವಾಗುತ್ತಿತ್ತು ನನಗೆ. ಆದರೆ ಕೃಷ್ಣ ಡೆಸ್ಕಿನ ಮುಂದೆ ನಿಂತಿರುತ್ತಿದ್ದರೆ ಅರ್ಜುನ ಕುಳಿತಿರುತ್ತಿದ್ದ. ??? ಅವರು ಪೂರ್ವ ತಯಾರಿಯಿಲ್ಲದೇ ಪಾಠ ಮಾಡಿದವರಲ್ಲ. ಮತ್ತು ಎಂದೂ ಕುಳಿತುಕೊಂಡು ಪಾಠ ಮಾಡಿದವರಲ್ಲ. ವಿ.ಎನ್.ಭಟ್ಟರ ಹಾಗೆ ನಾನು ಆಗಬೇಕಿತ್ತು ಎಂದು ಈಗಲೂ ಅನಿಸುತ್ತದೆ. ಆದರೆ ನಾನೊಬ್ಬ ಶಿಕ್ಷಕನಾಗಿ ಅವರ ಆದರ್ಶಗಳನ್ನು ಪಾಲಿಸುವುದೇ ಸುಯೋಗ ಎಂದು ಭಾವಿಸಿದ್ದೇನೆ. ಅವರ ಸ್ಪ್ಲೆಂಡರ್ ಗಾಡಿ, ಅವರು ಬರುವ ಸ್ಟೈಲ್, ಎಲ್ಲವೂ ನನಗೆ ಸ್ಫಟಿಕ ಸ್ಪಷ್ಟವಾಗಿ ನೆನಪಿದೆ. ವಿ.ಎನ್.ಭಟ್ಟರು ವಿಶ್ವೇಶ್ವರನೇ ಆಗಿ ನನ್ನ ಜೀವನದಲ್ಲಿ ದಯ ತೋರಿದ ಎಂದು ನಾನಾದರೂ ಭಾವಿಸುತ್ತೇನೆ. ಅಂಥ ಗುರುಗಳು ಸಿಗುವುದಕ್ಕೂ ಭಾಗ್ಯ ಬೇಕು.
ಇಂದು ನಾನು ತಿನ್ನುವ ಅನ್ನದ ಅಗುಳಿನ ಮೇಲೆ ಗುರುಗಳ ಕಾಳಜಿ ಎದ್ದು ತೋರುತ್ತದೆ ನನಗೆ. ನಾನು ನನ್ನ ಗುರುಗಳನ್ನು ಹಿಂದಿನಿಂದ ತೆಗಳಿದ್ದಿಲ್ಲ.‌ ಅನ್ಯ ಎಣಿಸಿದ್ದಿಲ್ಲ. ನಾಳೆ ನನಗೆ ಸಿಗುವ ವಿದ್ಯಾರ್ಥಿಗಳು ನನ್ನನ್ನು ಹೊಗಳದಿದ್ದರೂ ಚಿಂತೆಯಿಲ್ಲ. ತೆಗಳದಿದ್ದರೆ ಸಾಕಪ್ಪಾ ತಂದೆ. ಕಾಲ ಬದಲಾಗಿದೆ. ಶಿಕ್ಷಕರು ಮನೆ ಬಾಗಿಲಿಗೆ ಹೋಗಿ ಕೈಮುಗಿದು ನಿಲ್ಲುವ ಪರಿಸ್ಥಿತಿ ಬಂದಿದೆ.?
ಸದ್ಗುರು ಶ್ರೀಧರರ ಆಶೀರ್ವಾದ ವಿ.ಎನ್ ಭಟ್ಟ ಸರ್ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಪಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದ ಶಾಸಕ ದಿನಕರ ಶೆಟ್ಟಿ: ಕುಮಟಾ ತಾ.ಪಂ ಸಭಾಭವನದಲ್ಲಿ ಕಾರ್ಯಕ್ರಮ.

ವಿ.ಎನ್. ಭಟ್ಟ ಸರ್ ಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 94496 28026

??????⚫⚪???????⚫⚪?????

RELATED ARTICLES  ಸಾಹಿತ್ಯ ಸೇವಾ ದುರಂಧರ ರಾಜ್ಯ ಪ್ರಶಸ್ತಿಗೆ ಸಂದೀಪ ಭಟ್ಟ ಆಯ್ಕೆ..