ಗೋಕರ್ಣ: ರಾಸಾಯನಿಕ ಕೃಷಿ ಒಂದಲ್ಲ ಒಂದು ದಿನ ರೈತನ ಕುತ್ತಿಗೆಗೆ ಉರುಳಾಗುತ್ತದೆ. ದೇಶೀ ಗೋವನ್ನು ಸಾಕಿಕೊಂಡು ಇದ್ದವರು ಯಾರೂ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸ್ವಾವಲಂಬಿ ಎಂಬುದಕ್ಕೆ ಗೋವು ಬಲುದೊಡ್ಡ ನಿದರ್ಶನ. ಗೋನಿರ್ಭರತೆಯಿಂದ ಆತ್ಮನಿರ್ಭರತೆ ಸಾಧ್ಯವಾಗುತ್ತದೆ. ದೇಶದ ಗಮನ ಗೋವಿನ ಕಡೆಗೆ ಹರಿಯುವಂತೆ ಮಾಡಬೇಕು. ಗೋವು ದೇಶಕ್ಕೆ ಬೆಳಕಿನ ಕಿರಣವಾಗಿದ್ದು, ತಂತ್ರಜ್ಞಾನಗಳು ಗೋಜ್ಞಾನದ ಕಡೆಗೆ ಕೊಂಡೊಯ್ಯುವಂತಾಗಲಿ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಹೇಳಿದರು.
ಶ್ರೀರಾಮಚಂದ್ರಾಪುರ ಮಠದ ವತಿಯಿಂದ ದೇಸೀ ಗೋವು ಆಧಾರಿತ ಕೃಷಿಯ ಕುರಿತು ದೇಸೀ ಗೋವು – ಸ್ವಾವಲಂಬಿ ಸಾವಯವ ಕೃಷಿ ವೆಬಿನಾರ್ ಸರಣಿ ಕಾರ್ಯಕ್ರಮದಲ್ಲಿ ಪರಮಪೂಜ್ಯರು ವಿಶೇಷ ಆಶೀರ್ವಚನ ನೀಡಿದರು.
ಹಸಿರು ಕ್ರಾಂತಿ ಹಾಗೂ ಶ್ವೇತ ಕ್ರಾಂತಿ ಎರಡು ದೇಶಕ್ಕೆ ಶಾಪವಾಗಿ ಪರಿಣಮಿಸಿತು. ದೇಶ ಹಸಿರಾಗಲೂ ಇಲ್ಲ, ಬಿಳಿ ಆಗಲೂ ಇಲ್ಲ. ಹೊರತಾಗಿ ದೇಶವೆಲ್ಲ ಕೆಂಪಾಯಿತು. ಕೀಟವನ್ನು ಕೊಲ್ಲುವ ಉದ್ದೇಶದಿಂದ ಬಳಕೆಯಾದ ಎಂಡೋಸಲ್ಪಾನ್, ಇಡೀ ಪ್ರಕೃತಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ದೇಶೀ ಗೋವಾಧಾರಿತ ಕೃಷಿಯಲ್ಲಿರುವ ಫಲವತ್ತತೆ ಬೇರೆಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ರಾಸಾಯನಿಕ ಬಳಕೆಗಿಂತ ಹೆಚ್ಚು ಜೀವಾಮೃತದ ಬಳಕೆಯಿಂದ ತೋಟ ಫಲವತ್ತತೆಯಾಗಿರುತ್ತದೆ. ಗೋವಿನ ಸಗಣಿ ಮೂತ್ರದ ಮೂಲಕ ಪರಿಸರದ ಹಾಗೂ ಮನುಷ್ಯನ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ ಎಂದು ವಿಶ್ಲೇಷಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜಯಪುರ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಸಹಾಯಕ ಸಂಶೋಧನಾ ನಿರ್ದೇಶಕ ಡಾ. ಎಚ್. ಬಿ. ಬಬಲಾದ್ ಮಾತನಾಡಿ, ಪಾರಂಪರಿಕ ಸ್ವಾವಲಂಬಿ ಕೃಷಿ ಇದ್ದಾಗ ಭೂಮಿ ಫಲವತ್ತತೆಯಿಂದ ಕೂಡಿತ್ತು. ವಿದೇಶೀ ಕೃಷಿ ತಂತ್ರಜ್ಞಾನದ ಕಡೆಗೆ ಗಮನ ಹೋಗುತ್ತಿದ್ದ ಹಾಗೇ ಸ್ವಾವಲಂಬನೆ ಹಿಂದೆ ಬೀಳಲು ಆರಂಭವಾಯಿತು. ಆಹಾರದಲ್ಲೂ ಪೌಷ್ಠಿಕಾಂಶದ ಕೊರತೆ ಕಾಣಿಸಿಕೊಳ್ಳಲು ಆರಂಭವಾಯಿತು. ಸಾವಯವ ಕೃಷಿಯ ಮೂಲಕ ಮಣ್ಣನ್ನು ಜೀವಂತಗೊಳಿಸುವ ಜತೆಗೆ ಆರ್ಥಿಕ ಲಾಭದಾಯಕವಾಗಿಸಬಹುದು. ಗುಣಮಟ್ಟದ ಆಹಾರದ ಜತೆಗೆ ಪರಿಸರ ಸಂರಕ್ಷಣೆಯನ್ನು ಮಾಡಿಕೊಳ್ಳಲು ಸಾಧ್ಯವಿದೆ ಎಂದರು.
ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಎಸ್.ಎ.ಪಾಟೀಲ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸಾವಯವ ಕೃಷಿ ಮಾಡುವ ರೈತರ ಸೈನ್ಯ ಸಿದ್ಧವಾಗಬೇಕಿದೆ. ದೇಸೀ ಗೋವಿನ ಮಹತ್ವವನ್ನು ಮನವರಿಕೆ ಮಾಡುವ ಕಾರ್ಯ ನಡೆಯಬೇಕಾಗಿದೆ. ಮಹಿಳೆಯರನ್ನು ಗೋಸಾಕಾಣಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅನಿವಾರ್ಯತೆ ಇದೆ. ಗೋವಿಗೆ ಮಹತ್ವ ನೀಡಿ ತಮ್ಮದೇ ಆದ ಪ್ರಯೋಗಗಳನ್ನು ಮಾಡಿದ್ದಾರೆ. ಮನಸ್ಸು ಕೊಟ್ಟು ಮಾಡಿದಾಗ ಕೃಷಿಯಲ್ಲಿ ಲಾಭದಾಯವಾಗಬಹುದು ಎಂದು ತಿಳಿಸಿದರು.
ಮಂಡ್ಯ ಕೃಷಿ ಮಹಾವಿದ್ಯಾಲಯ ವಿಸಿ ಫಾರ್ಮ್ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಾಕ ಮತ್ತು ಮುಖ್ಯಸ್ಥ ಡಾ. ಎಸ್. ಎಸ್. ಪ್ರಕಾಶ್ ವೆಬಿನಾರ್ ನಿರ್ವಹಿಸಿದರು. ಸಂಶೋಧನಾ ಖಂಡದ ಶ್ರೀಸಂಯೋಜಕ ಗುರುರಾಜ ಪಡೀಲ್ ಪ್ರಸ್ತಾವನೆಗೈದರು. ಕೃಷಿ ವಿಜ್ಞಾನ ವಿಭಾಗದ ಶ್ರೀಸಂಯೋಜಕ ವಿಘ್ನೇಶ್ ಎನ್ ಎಸ್ ವಂದಿಸಿದರು. ಅನುಸಂಯೋಜಕಿ ಆತ್ಮಿಕಾ ಹಾಗೂ ರಾಧಾಕೃಷ್ಣ ಬಂದಗದ್ದೆ ಕಾರ್ಯಕ್ರಮ ನಿರೂಪಿಸಿದರು.