ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.
ಶ್ರೀ ಲಕ್ಷ್ಮೀಶ ಶಾಸ್ತ್ರಿ- ಹೊಸಾಕುಳಿ (ಕಿನ್ನಿಗೋಳಿ)
ಉಣ್ಣುವುದಕ್ಕಾಗಿಯೇ ಬದುಕುವುದು ಒಂದು ರೀತಿ. ಬದುಕಿಗಾಗಿ ಉಣ್ಣುವುದು ಮತ್ತೊಂದು ರೀತಿ. ದುಡ್ಡು ಹೆಚ್ಚಾದವರು ಪಾರ್ಟಿ, ಮೋಜು, ಮಸ್ತಿ, ನಡೆಸಿ ಬದುಕನ್ನು ಸಂಭ್ರಮಿಸುತ್ತಾರೆ. ದುಡ್ಡು ಕೈಗೆ ಹತ್ತದವರು ಕುಟುಂಬ ನಿರ್ವಹಣೆಗಾಗಿ ಕಣ್ಣೀರಿಡುತ್ತಾರೆ. ಜೀವನವನ್ನು ಶಿಸ್ತಾಗಿ ನಿರ್ವಹಿಸುವುದೂ ಒಂದು ಕಲೆ. ಅದು ಎಲ್ಲರಿಗೂ ಒಲಿಯುವುದಿಲ್ಲ. ಕೆಲವರ ಜೀವನವೇ ನಮ್ಮ ಬದುಕಿನ ಅತಿದೊಡ್ಡ ಪಾಠ. ಅಂಥ ಶಿಸ್ತಿನ ಬದುಕಿನ ನಿರ್ವಹಣೆಯ ನಮ್ಮ ಕುಟುಂಬದ ಆತ್ಮೀಯ ವ್ಯಕ್ತಿಯೊಬ್ಬರನ್ನು ಈ ಮೂಲಕ ಪರಿಚಯಿಸುತ್ತಿದ್ದೇನೆ. ಶ್ರೀಯುತ ಲಕ್ಷ್ಮೀಶ ಶಾಸ್ತ್ರಿ ಕಿನ್ನಿಗೋಳಿ ಇವರು ಇಂದಿನ ನನ್ನ ಅಕ್ಷರ ಅತಿಥಿ.
ಲಕ್ಷ್ಮೀಶ ಶಾಸ್ತ್ರಿಯವರು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹೊಸಾಕುಳಿಯವರು. ಆದರೆ ಕಳೆದ ಮೂರ್ನಾಲ್ಕು ದಶಕಗಳಿಂದ ಅವರು ದೂರದ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಬಂಧದಲ್ಲೂ ನಮಗೆ ಹತ್ತಿರದವರಾದ ಅವರು ನಮ್ಮ ಮೇಲೆ ತೋರುವ ಕಾಳಜಿ ನನ್ನಿಂದ ಈ ಅಕ್ಷರಗಳನ್ನು ಬರೆಸುತ್ತಿದೆ.
ಕಿನ್ನಿಗೋಳಿಯಿಂದ ಊರಿಗೆ ಬಂದಾಗೆಲ್ಲ ಲಕ್ಷ್ಮೀಶ ಬಾವ ನಮ್ಮ ಮನೆಗೊಂದು ಭೇಟಿ ಕೊಡುತ್ತಿದ್ದರು. ನಾವೆಲ್ಲ ಚಿಕ್ಕವರಿರುವಾಗಲೇ ಅವರು ಕಿನ್ನಿಗೋಳಿ ಸೇರಿಯಾಗಿತ್ತು. ವರ್ಷಕ್ಕೆ ನಾಲ್ಕಾರು ಬಾರಿ ಮಾತ್ರ ಅವರ ಮುಖದರ್ಶನ ಆಗುತ್ತಿತ್ತು. ಅತ್ಯಂತ ಸುಂದರಕಾಯರಾದ ನಮ್ಮ ಲಕ್ಷ್ಮೀಶ ಬಾವ ಬಂದಾಗೆಲ್ಲ ನನಗೆ ನಟ ವಿಷ್ಣುವರ್ಧನ್ ನೆನಪಾಗುತ್ತಿತ್ತು. ಅವರ ಡ್ರೆಸ್ ಸೆನ್ಸ ಕೂಡ ಮೆಚ್ಚತಕ್ಕಂತಹುದು. ಮಾತು ಕೂಡ ಅಷ್ಟು ಸುಸ್ಪಷ್ಟ. ಅವರ ನಡೆ ನುಡಿ ಬದುಕು ಎಲ್ಲವೂ ಶಿಸ್ತು. ಕಿನ್ನಿಗೋಳಿಗೆ ಹೋಗಿಯೂ ಊರಿನ ಅಭಿಮಾನ ಬಿಡದ ಅವರನ್ನು ನಾವು ಅತ್ಯಂತ ಆಸ್ಥೆಯಿಂದ ಗಮನಿಸುತ್ತಿದ್ದೆವು.
ಊರಿನಲ್ಲಿ ರಂಗ ಪರ ಊರಿನಲ್ಲಿ ಮಂಗ….ಎಂಬ ಗಾದೆ ಮಾತೊಂದಿದೆ. ಎಷ್ಟೋ ಜನ ಬೇರೆ ಊರಿಗೆ set ಆಗುವುದೇ ಇಲ್ಲ. ಆದರೆ ನಮ್ಮ ಲಕ್ಷ್ಮೀಶ ಬಾವ ಒಬ್ಬ ಕ್ರಿಯಾಶೀಲ ಶಿಕ್ಷಕರಾಗಿ ಕಿನ್ನಿಗೋಳಿಯಲ್ಲಿ ಹೆಸರು ಮಾಡಿದರು. ಕೇವಲ ಶಿಕ್ಷಕ ವೃತ್ತಿಯೊಂದನ್ನೇ ಮಾಡದೇ ಯಕ್ಷಗಾನ ಭಾಗವತಿಕೆ, ಸಂಗೀತ ಮುಂತಾದ ತನ್ನ ಪ್ರವೃತ್ತಿಯನ್ನು ಕೂಡ ವಿಶೇಷವಾಗಿ ಬೆಳೆಸಿಕೊಂಡು ಹಲವಾರು ಸಾಂಸ್ಕೃತಿಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮನೆಗೆ ಬಂದಾಗೆಲ್ಲ ನಮ್ಮ ಮನೆಗೊಂದು ಭೇಟಿ ಕೊಟ್ಟು ನಮ್ಮ ತಂದೆಯವರೊಟ್ಟಿಗೆ ಸುಖದುಃಖ ಹಂಚಿಕೊಂಡು ಹೋಗುವುದು ಅವರ ರೂಢಿ.
ಎಲ್.ಎನ್ ಶಾಸ್ತ್ರಿಯವರು ನಿರ್ವಿವಾದದ, ಅವಿರೋಧ ವ್ಯಕ್ತಿ. ಅಚ್ಚುಕಟ್ಟಿನ ಜೀವನ ನಿರ್ವಹಣೆಯಿಂದ ಕಿನ್ನಿಗೋಳಿಯಲ್ಲಿ ಸ್ವಂತ ಜಾಗ ಖರೀದಿಸಿ ಮನೆ ಮಾಡಿದರು. ಸ್ವಂತ ದುಡಿಮೆ, ಕಠಿಣ ಪರಿಶ್ರಮ ಎರಡೇ ಅವರ ಮಂತ್ರ. ಕೃಷಿಯೇ ಋಷಿ ಎಂದು ತಿಳಿದ ಅವರು ನಮ್ಮೂರಿನಿಂದ ವೀಳ್ಯದೆಲೆ ಬಳ್ಳಿ ತೆಗೆದುಕೊಂಡು ಹೋಗಿ ಕಿನ್ನಿಗೋಳಿಯಲ್ಲೂ ಅದನ್ನು ಹುಲುಸಾಗಿ ಬೆಳೆಸಿದರು. ಅಷ್ಟಕ್ಕೂ ಸುಮ್ಮನಾಗದೇ ಊರಿನಲ್ಲಿ ಕೂಡ ತೋಟ ಖರೀದಿಸಿ ಅದನ್ನೂ ಮಕ್ಕಳ ಹಾಗೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅವರು ಸರಿಸುಮಾರು 18 ಗಂಟೆ ಕೆಲಸ ನಿರ್ವಹಿಸುತ್ತಾರೆ. ಆಪತ್ಕಾಲಕ್ಕೆ ಹತ್ತಿರದವರಿಗೆಲ್ಲಾ ನೆರವಾಗುತ್ತಾರೆ. ಅವರ ಕಾರ್ಯ ನಿರ್ವಹಣೆ ಎಂತಹವರನ್ನೂ ಸ್ಫೂರ್ತಿಗೊಳಿಸುವಂಥದ್ದು.
ಅಪ್ಪನಿಗೆ heart operation ಮಾಡಿಸಬೇಕಾದ ಪ್ರಸಂಗ ಬಂದಾಗ ನಾನು ಮಂಗಳೂರಿಗೆ ತಕ್ಷಣ ಹೊರಡುವ ಪರಿಸ್ಥಿತಿ ಬಂತು. ನಾಲ್ಕಾರು ಬಟ್ಟೆಗಳನ್ನು ತುರುಕಿಕೊಂಡು ಹೊರಡುವ ಹೊತ್ತಿಗೆ ನನ್ನ ತಲೆ, ಜೇಬು ಸಂಪೂರ್ಣ ಬರಿದಾಗಿತ್ತು. ಆದರೂ ಹಾಗೋ ಹೀಗೋ ತಡಕಾಡಿ 30000 ತೆಗೆದುಕೊಂಡು ಹೊರಟುಬಿಟ್ಟೆವು. ಹೀಗೊಂದು ಥಟ್ಟನೆ ಪರೀಕ್ಷೆ ಎದುರಾಗುತ್ತದೆ ಎನ್ನುವ ನಿರೀಕ್ಷೆಯಿಲ್ಲದ ನಮಗೆ ಸಿದ್ಧರಾಗುವುದಕ್ಕೆ ಸಮಯ ಬೇಕಿತ್ತು. ಹೀಗಾಗಿ ಒಮ್ಮೆ ಮಂಗಳೂರಿಗೆ ಹೋಗಿ ತೋರಿಸಿಕೊಂಡು ಬರೋಣ ವಾರ ಬಿಟ್ಟು ಬಂದು operation ಮಾಡಿಸೋಣ ಎನ್ನುವ ಇರಾದೆಯಲ್ಲಿ ಮಂಗಳೂರಿಗೆ ಪ್ರಯಾಣ ಬೆಳೆಸಿದೆ. ಇಂತಹ ಆತಂಕದ ಪರಿಸ್ಥಿತಿ ಎದುರಿಸುವ ಧೈರ್ಯ ವಯೋ ಸಹಜವಾಗಿ ನನಗಾಗ ಬಂದಿರಲಿಲ್ಲ. ಆದರೆ ಕಿನ್ನಿಗೋಳಿಯ ಲಕ್ಷ್ಮೀಶ ಬಾವ ಏನು ಸಲಹೆ ಕೊಡುತ್ತಾನೋ ಹಾಗೆ ಮಾಡಿದರಾಯಿತು ಎನ್ನುವ ಧೈರ್ಯದಲ್ಲಿ ಕಿನ್ನಿಗೋಳಿಗೆ ಹೋಗಿ ರಾತ್ರಿ ತಲುಪಿದೆವು. ನಮ್ಮನ್ನು ಕರೆದುಕೊಂಡು ಹೋಗಲು ರೈಲು ನಿಲ್ದಾಣಕ್ಕೆ ಲಕ್ಷ್ಮೀಶ ಬಾವ ಕಾರು ತಂದಿದ್ದ. ನನ್ನ ತಲೆ ಮಾತ್ರ ಗಿರಗಿರನೆ ತಿರುಗುತ್ತಿತ್ತೆ ಹೊರತು ಮುಂದಿನ ದಾರಿ ತೋಚುತ್ತಿರಲಿಲ್ಲ. ಆ ರಾತ್ರಿ ನನ್ನನ್ನು ಕುಳ್ಳಿರಿಸಿ ಲಕ್ಷ್ಮೀಶ ಬಾವ ತಂದೆಯವರ ಪರಿಸ್ಥಿತಿ ವಿಚಾರಿಸಿದ. ನಂತರ ನಾನು ನಾವು ಈಗ ಪರೀಕ್ಷೆಗೆಂದು ಬಂದಿರುವುದಾಗಿಯೂ….. ತಂದೆಯವರನ್ನು ಇಲ್ಲಿಯೇ ಬಿಟ್ಟು ನಾನು ಮರಳಿ ಮನೆಗೆ ಹೋಗಿ ಹಣಕಾಸು ವ್ಯವಸ್ಥೆ ಮಾಡಿಕೊಂಡು ಮರಳಿ ಬರುವುದಾಗಿಯೂ…. ಅವನಿಗೆ ತಿಳಿಸಿದೆ. ಆಗ ಲಕ್ಷ್ಮೀಶ ಬಾವ ನೀನು ಹೆದರಬೇಡ….. ನಾಳೆ ಆಸ್ಪತ್ರೆಗೆ ಹೋಗಿ ವಿಚಾರಿಸು….. ಅಂತಹ ಅವಶ್ಯಕತೆ ಬಿದ್ದರೆ ನಾಳೆ ನನ್ನ ATM card ಒಯ್ದಿರು…ಅಂದ. ಛೇ ಸ್ವಾಭಿಮಾನದಿಂದ ಬದುಕಿದ ನಮಗೆ ಇಂತಹ ಪರಿಸ್ಥಿತಿ ಬಂದೊದಗಿತಲ್ಲ ಎಂದು ಚಿಂತೆಯಾದರೂ ನಾನು ನಯವಾಗಿ ಅದನ್ನು ತಿರಸ್ಕರಿಸಿ ಮನೆಗೆ ಹೋಗಿ ಮತ್ತೆರಡು ದಿನ ಬಿಟ್ಟು ಮರಳುವುದಾಗಿ ತಿಳಿಸಿದೆ. ಆ ಹೊತ್ತಿಗೆ ಅವನು ನೀಡಿದ ಸಾಂತ್ವನದ ಮಾತುಗಳು ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿದವು. ತಂದೆಯವರ ಯಶಸ್ವಿ ಹೃದಯ ಚಿಕಿತ್ಸೆ ನಡೆಯಿತು.
ಲಕ್ಷ್ಮೀಶ ಬಾವನದು ಕರುಣೆ ತುಂಬಿದ ಹೃದಯ. ನಮ್ಮಕ್ಕನ ಮದುವೆ ಮಾಡುವ ಪ್ರಸಂಗ ಬಂದಾಗ ಎಲ್ಲೂ ಸರಿಯಾಗಿ ಜಾತಕ ಹೊಂದಲಿಲ್ಲ. ಹೊಂದಿದರೂ ಕಾರಣಾಂತರಗಳಿಂದ ತಪ್ಪಿ ಹೋಗುತ್ತಿತ್ತು. ಆ ಸಮಯದಲ್ಲಿ ಮತ್ತೆ ನೆರವಿಗೆ ಬಂದ ಲಕ್ಷ್ಮೀಶ ಬಾವ ಖುದ್ದಾಗಿ ತಾನೇ ಹೋಗಿ ಜಾತಕ ಕೊಟ್ಟು ವಿಚಾರಿಸಿ ಅಕ್ಕನ ಮದುವೆ ಮಾಡಿಸಿದ. ಹೀಗಾಗಿ ನಮ್ಮ ಕುಟುಂಬದ ಬಗ್ಗೆ ಅವನಿಟ್ಟ ಕಾಳಜಿ ನಮ್ಮನ್ನು ಆರೋಗ್ಯಕರವಾಗಿ ಉಸಿರಾಡುವಂತೆ ಮಾಡಿದೆಯೆಂಬುದು ಅತಿಶಯೋಕ್ತಿಯಲ್ಲ.
ಊರಿನಲ್ಲಿ ಭಜನೆಯಾದರೆ ಸಾಕು ಕಿನ್ನಿಗೋಳಿಯಿಂದ ಓಡಿ ಬಂದು ತಾನೂ ಪಾಲ್ಗೊಳ್ಳುವ ಲಕ್ಷ್ಮೀಶ ಬಾವ ಅತ್ಯಂತ ಸಮಾಧಾನಿ ಮನುಷ್ಯ. ಯಾವುದೇ ವಿಚಾರವಿರಲಿ ಕೂಲಂಕುಷವಾಗಿ ವಿಚಾರಿಸದೇ ಆತ ಹೆಜ್ಜೆಯಿಡುವವನೇ ಅಲ್ಲ. ಮನವರಿತು ನಡೆಯುವ ಶೈಲಕ್ಕ ಅವನಿಗೆ ಸಾಥಿಯಾಗಿ ಹೆಗಲುಕೊಟ್ಟಿದ್ದಾಳೆ. ಮಕ್ಕಳು ಬಹಳ ಪ್ರತಿಭಾ ಗುಣ ಸಂಪನ್ನರು. ಹೋದಲ್ಲಿ, ಬಂದಲ್ಲಿ, ನಿಂತಲ್ಲಿ, ಕುಂತಲ್ಲಿ ಶಿಸ್ತು ಪಾಲಿಸುವ ಲಕ್ಷ್ಮೀಶ ಬಾವ ನನ್ನ ಲೆಕ್ಕದಲ್ಲಿ ಪರಿಪೂರ್ಣ ಸಾಧಕ ಮನುಷ್ಯ. ಊರಿನಲ್ಲೂ ಪರ ಊರಿನಲ್ಲೂ ಹೆಸರು ಮಾಡಿ ನಿರ್ವಿವಾದದ ಬದುಕು ಸಾಗಿಸಿಕೊಂಡು ಬಂದ ಮಾರ್ಗದರ್ಶಿ ಗುರು.
ಲಕ್ಷ್ಮೀಶ ಬಾವನ ಸಹೋದರ ಗಜಾನನ ಶಾಸ್ತ್ರಿ ದಂಪತಿಯ ಪ್ರೀತಿಯನ್ನೂ ನಾವು ಮರೆಯುವಂತಿಲ್ಲ. ಅಯ್ಯೋ ಎಂದ ಕಾಲಕ್ಕೆ ಓಡಿ ಬರುವ ಸಹೋದರರವರು. ಅವರ ಸಹೋದರಿಯರಾದ ಲಲಿತಾ, ಮುಕಾಂಬಾ, ಶೈಲಾ ಹೀಗೆ ಪ್ರತಿಯೊಬ್ಬರೂ ನಮ್ಮನ್ನು ತಮ್ಮದೇ ಕುಟುಂಬದವರಂತೆ ಕಂಡಿದ್ದಾರೆ. ಅವರ ಪ್ರೀತಿಗೆ ನಾವು ಋಣಿಗಳು.
ಸುಖವಿದ್ದಾಗ ಸಾವಿರ ಜನ ಜೈ ಎನ್ನಬಹುದು. ಕಷ್ಟವಿದ್ದಾಗ ನಮ್ಮ ಜೊತೆ ನಿಲ್ಲುವ ಜನ ಯಾರು?! ಎಂಬುದನ್ನು ಅರಿತಿರಬೇಕು. ಎಲ್.ಎನ್.ಶಾಸ್ತ್ರಿಯವರದ್ದು ಪಾರದರ್ಶಕ ಬದುಕು. ಸ್ವಂತ ಪರಿಶ್ರಮ, ಬೆವರಿನ ದುಡಿಮೆಯಿಂದ ಅವರು ಸಾರ್ಥಕ ಸರಳ ಬಾಳ್ವೆ ನಡೆಸುತ್ತಿದ್ದಾರೆ. ಭೂಮಿತಾಯಿಗೆ ಅವರು ತೋರುವ ಶೃದ್ಧೆ ಎಂತಹವರನ್ನೂ ಬೆರಗುಗೊಳಿಸುತ್ತದೆ. ಊರಿನಲ್ಲೇ ಇದ್ದು ಕೃಷಿ ಮಾಡುವವರೂ ಅವರನ್ನು ನೋಡಿ ಕಲಿಯುವುದಿದೆ. ಕನ್ನಡ ಭಾಷಾ ಶಿಕ್ಷಕರಾಗಿ ಅವರಿಗಿರುವ ಪಾಂಡಿತ್ಯವೂ ಅಸದಳವಾದದ್ದು. ಗಮಕ ಹಾಡುವ ರೀತಿಯಂತೂ ಮನ ಮೋಹಕ. ಬಹುಮುಖ ಪ್ರತಿಭಾನ್ವಿತ ಲಕ್ಷ್ಮೀಶ ಶಾಸ್ತ್ರಿಯವರಂತೆ ಬದುಕು ಮಾಡಿದರೆ ಸಾಕು ಎಂಬುದೇ ನಮ್ಮ ನಿತ್ಯ ಪ್ರಾರ್ಥನೆ. ಅವರೇ ನಮ್ಮ ಆದರ್ಶ. ಅವರಿಗೆ ಗೆಲುವಾಗಬೇಕು. ಗೆಲುವಾಗುತ್ತಲೇ ಇರಬೇಕು.
ಸದ್ಗುರು ಶ್ರೀಧರರ ಆಶೀರ್ವಾದ ಲಕ್ಷ್ಮೀಶ ಬಾವ ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.
ಲಕ್ಷ್ಮೀಶ ಶಾಸ್ತ್ರಿಯವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು
✍ಸಂದೀಪ ಎಸ್ ಭಟ್ಟ
❤️????????❤️????????❤️???
ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ
?+91 97416 71244
??????⚫⚪???????⚫⚪?????