ಮಠ ಸನಾತನ ಸಂಸ್ಥೆಯಾದರೆ, ಹವ್ಯಕ ಮಹಾಸಭೆಯು ಪುರಾತನ ಸಂಸ್ಥೆಯಾಗಿದೆ. ಸಮಾಜದ ಹಿತ ಸಾಧನೆಯಲ್ಲಿ ನಿರತವಾಗಿರುವ ಮಹಾಸಭೆಯು ಇತ್ತೀಚಿನ ದಿನಗಳಲ್ಲಿ ಅನೇಕಾನೇಕ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಶ್ರೀರಾಮಚಂದ್ರಾಪುರಮಠದ ಮೂಲಮಠವಾದ; ಗೋಕರ್ಣದ ಅಶೋಕೆಯ ಪರಿಸರದಲ್ಲಿ ಚಾತುರ್ಮಾಸ್ಯ ವ್ರತವನ್ನು ನಡೆಸುತ್ತಿರುವ ಪೂಜ್ಯ ಶ್ರೀಗಳು, ಹವ್ಯಕ ಮಹಾಸಭೆಯಿಂದ ಸಮರ್ಪಿಸಲಾದ ಗುರುಭಿಕ್ಷಾ ಸೇವೆ, ಗುರುಪಾದುಕಾ ಪೂಜೆ, ಗೋಸೇವೆಗಳನ್ನು ಸ್ವೀಕರಿಸಿ ಮಾತನಾಡಿ; ಭಾರತೀಯ ವಿದ್ಯೆಗೆ ಒತ್ತು ಕೊಡಲಾಗಿಯೇ, ಈ ವರ್ಷದ ಚಾತುರ್ಮಾಸ್ಯವನ್ನು “ವಿದ್ಯಾ ಚಾತುರ್ಮಾಸ್ಯ” ವಾಗಿ ಆಚರಿಸಲಾಗುತ್ತಿದೆ. ಮಕ್ಕಳಿಗೆ ಭವಿಷ್ಯದ ಬೆಳಕು ತೋರಿಸುವ, ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಪೂರಕವಾದ ಗುರುಕುಲಗಳ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ವಿಷ್ಣುಗುಪ್ತ ವಿಶ್ವ ವಿದ್ಯಾಪೀಠದ ಕುರಿತಾಗಿ ತಿಳಿಸಿದರು.

RELATED ARTICLES  ಕರೋನಾ ಹಿನ್ನೆಲೆ ನಡೆಯಲ್ಲ ಬಾಡದ ಜಾತ್ರೆ

ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದಂತಹ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಿದ ದೃಷ್ಟಾಂತ ನಮ್ಮ ಕಣ್ಣ ಮುಂದೆಯೇ ಇದ್ದು, ಸಮಾಜದ ಸಂಘಟನೆಯಲ್ಲಿ ಮಹಾಸಭೆ ತೊಡಗಿಸಿಕೊಂಡಿದೆ. ಮಹಾಸಭೆಗೆ ಮಠದ ಆಶೀರ್ವಾದ ಸದಾ ಇರಲಿದ್ದು, ಇನ್ನಷ್ಟು ಒಳ್ಳೆಯ ಕಾರ್ಯಗಳ ಮೂಲಕ ಮಹಾಸಭೆ ಸಮಾಜಕ್ಕೆ ಬೆಳಕು ನೀಡಲಿ ಎಂದು ಹಾರೈಸಿದರು.

RELATED ARTICLES  ಅನಂತ ಕುಮಾರ್ ಹೆಗಡೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ?

ಶ್ರೀ ಅಖಿಲ ಹವ್ಯಕ ಮಹಾಸಭೆಯ ಪರವಾಗಿ ನಿರ್ದೇಶಕರಾದ ಆರ್ ಜಿ ಹೆಗಡೆ ಹೊಸಾಕುಳಿ ಗುರುಪಾದುಕಾ ಪೂಜೆಯನ್ನು ಮಾಡಿದರು. ಪ್ರಸ್ತುತ ಕೊರೋನಾ ನಿಬಂಧನೆಗಳ ಕಾರಣದಿಂದಾಗಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕಾಸರಗೋಡು, ಹೊರರಾಜ್ಯ ಸೇರಿದಂತೆ ಹವ್ಯಕ ಮಹಾಸಭೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ನೇರವಾಗಿ ಉಪಸ್ಥಿತರಿರಲು ಸಾಧ್ಯವಾಗಿರಲಿಲ್ಲ.

ಗೋಪಾಲಕೃಷ್ಣ ಭಟ್ ಹಂಡ್ರಮನೆ, ಸುಬ್ರಾಯ ಭಟ್ ಮೂರೂರು, ಕೃಷ್ಣಮೂರ್ತಿ ಶಿವಾನಿ, ಅರುಣ್ ಹೆಗಡೆ ಸೇರಿದಂತೆ ಮಹಾಸಭೆಯ ಸ್ಥಳೀಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.