ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಈ ಸಲದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ರ‍್ಯಾಂಕ್ ಪಡೆದ ತಾಲೂಕಿನ ಮೊದಲ ನಾಲ್ವರು ಶ್ರೇಯಾಂಕಿತರಾದ ಸಂಜಯ ದತ್ತಾ ನಾಯಕ, ಕಾರ್ತಿಕ ಸದಾನಂದ ನಾಯ್ಕ, ಅಕ್ಷಯ ಅನಿಲ್ ನಾಯ್ಕ ಹಾಗೂ ಪ್ರಜ್ಞಾ ಪ್ರಕಾಶ ಶಾನಭಾಗ ಇವರನ್ನು ತನ್ನ ಮಾಸಿಕ ಔತಣಕೂಟದ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿತು.
ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ವಿದ್ಯಾರ್ಥಿನಿ ಶ್ರೇಯಾ ರಾವ್ ಪ್ರಸ್ತುತ ಪ್ರತಿಭಾವಂತ ವಿದ್ಯಾರ್ಥಿಗಳು ಎಕೊನೊಮಿಕ್ಸ್ ಓದಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಆರ್ಥಿಕತೆಯ ಕುರಿತ ಬದಲಾವಣೆಗಳನ್ನ ಗಮನಿಸುತ್ತಾ ಚೀನಾದಂತಹ ದೇಶಗಳ ಆರ್ಥಿಕ ನೀತಿಯಿಂದ ಕಲಿಯುವುದು ಬಹಳಷ್ಟಿದೆ ಎಂದು ಅಭಿಪ್ರಾಯಪಟ್ಟರು.
ಕೇವಲ ಇಂಜಿನಿಯರಿಂಗ್, ಮೆಡಿಕಲ್, ಲಾಯರ್‌ಗಳ ಕಡೆಗೆ ಮಾತ್ರ ಮಕ್ಕಳು ವಾಲದೇ, ವಾಣಿಜ್ಯ ವಿಭಾಗದಲ್ಲೂ ಅಧ್ಯಯನ ನಡೆಸಬೇಕಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಶಶಿಕಾಂತ ಕೋಳೇಕರ ದೇಶವನ್ನು ಸುಭೀಕ್ಷೆಗೊಳಿಸಬೇಕಾದ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದ್ದು ದೇಶಕಟ್ಟುವ ಕೈಂಕರ್ಯದಲ್ಲಿ ಕೈಜೋಡಿಸುವ ಪಣ ತೊಡಬೇಕಾಗಿದೆ ಎಂದರು. ಎನ್ಸ್ ಅಧ್ಯಕ್ಷೆ ಸೊನಾಲಿ ಕೋಳೇಕರ ಕ್ಲಬ್ ಚಟುವಟಿಕೆಗಳನ್ನು ಪ್ರಸ್ತಾಪಿಸಿದರು. ಅನೆಟ್ ಧ್ಯಾನ್ ಸಂದೀಪ ನಾಯಕ ಪರಿಚಯಿಸಿದರು. ಡಾ.ದೀಪಕ ಡಿ. ನಾಯಕ ಪೋಲಿಯೋ ಮುಕ್ತಗೊಳಿಸುವಲ್ಲಿ ರೋಟರಿಯ ಪಾತ್ರವನ್ನು ಸಭೆಗೆ ಅರುಹಿದರು. ಸಂವಾದದಲ್ಲಿ ಚಂದನ್ ಕುಬಾಲ್, ಕಿರಣ ನಾಯಕ, ವಸಂತ ರಾವ್ ಮೊದಲಾದವರು ಪಾಲ್ಗೊಂಡರು. ಪ್ರಾರಂಭದಲ್ಲಿ ರೀಷಾ ಸಂದೀಪ ನಾಯಕ ಪ್ರಾರ್ಥಿಸಿದರು. ರೋಟರಿ ಕಾರ್ಯದರ್ಶಿ ಅತುಲ್ ಕಾಮತ ವಂದಿಸಿದರು. ಜಯವಿಠ್ಠಲ ಕುಬಾಲ್ ಮತ್ತು ಎನ್.ಆರ್.ಗಜು ಕಾರ್ಯಕ್ರಮ ನಿರ್ವಹಿಸಿದರು.