ಗೋಕರ್ಣ: ಭವ್ಯ ಭವಿಷ್ಯದ ಸೂಚಕ, ದೇಶದ ದಿಶೆಯನ್ನೇ ಬದಲಾಯಿಸಬಲ್ಲ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಯ ಸಂಕಲ್ಪ ವಿದ್ಯಾ ಚಾತುರ್ಮಾಸ್ಯ ಸಂದರ್ಭದಲ್ಲಿ ಸಾಕಾರಗೊಂಡಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕವನದ ಆವರಣದಲ್ಲಿ ನಡೆದ 27ನೇ ಚಾತುರ್ಮಾಸ್ಯ ಸೀಮೋಲ್ಲಂಘನ ಧರ್ಮಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ತಕ್ಷಶಿಲೆಯ ಪುನಃಸೃಷ್ಟಿ ಇದಾಗಲಿದೆ. ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವಗಳು ಇಲ್ಲಿ ನಿರ್ಮಾಣವಾಗಲಿವೆ ಎಂದರು.


ಶಿವನ ಆತ್ಮಲಿಂಗ ಕ್ಷೇತ್ರ, ಆಂಜನೇಯನ ಜನ್ಮಭೂಮಿ, ಶ್ರೀಶಂಕರರು ಮೂರು ಬಾರಿ ಪಾದಸ್ಪರ್ಶ ಮಾಡಿದ ಪುಣ್ಯಭೂಮಿ, ದೈವರಾತರ ಕರ್ಮಭೂಮಿಯಾದ ಗೋಕರ್ಣದ ಮಣ್ಣಿನ ಮಹಿಮೆ ಅಪಾರ. ಇಂಥ ಕ್ಷೇತ್ರದಲ್ಲಿ ಕೈಗೊಂಡ ಚಾತುರ್ಮಾಸ್ಯಕ್ಕೆ ವಿಶೇಷ ಮಹತ್ವವಿದೆ. ಇಂಥ ಪುಣ್ಯಭೂಮಿಯಲ್ಲಿ ವಿಶ್ವವಿದ್ಯಾಪೀಠ ಉಗಮವಾಗುತ್ತಿದೆ ಎಂದು ಬಣ್ಣಿಸಿದರು.


ದೈವೀಶಕ್ತಿಯ ವಿಲಾಸದಿಂದ ವಿವಿವಿ ಕಾರ್ಯಗಳು ಕಲ್ಪನೆಗೂ ಮೀರಿದ ರೀತಿಯಲ್ಲಿ ನಡೆಯುತ್ತಿವೆ. ಕೇವಲ 10 ಗಂಟೆಯಲ್ಲಿ ಪುಟ್ಟ ಗೋಶಾಲೆ ನಿರ್ಮಾಣವಾಗಿದೆ. ಇಡೀ ವಿಶ್ವದ ಗಮನವನ್ನು ಸೆಳೆಯುವ ವಿದ್ಯಾಚಾತುರ್ಮಾಸ್ಯ ಅರ್ಥಪೂರ್ಣವಾಗಿ ನಡೆದಿದೆ ಎಂದು ಹೇಳಿದರು. ಬದುಕಿನ ಬವಣೆ ನೀಗಲಿ; ಸಮಾಜಕ್ಕೆ ನಿಮ್ಮಿಂದ ಸೇವೆ ಮತ್ತಷ್ಟು ಸಲ್ಲಲಿ ಎಂದು ಹರಸಿದರು.
ರಾಜಕಾರಣದಲ್ಲಿದ್ದೂ ಪರಿಶುದ್ಧ ವ್ಯಕ್ತಿತ್ವವನ್ನು ಉಳಿಸಿಕೊಂಡ ಅಪರೂಪದ, ನಿಷ್ಠುರ, ಸ್ಪಷ್ಟನುಡಿಯ ಕಾರ್ಯಕರ್ತನಿಗೆ ಪ್ರಶಸ್ತಿ ಸಂದಿದೆ ಎಂದು ಸ್ವಾಮೀಜಿ ಹೇಳಿದರು.

RELATED ARTICLES  ಶ್ರೀ ಮಾತಾಜಿ ಬಸಮ್ಮ ತಾಯಿಯವರಿಗೆ 'ಗೋಕರ್ಣ ಗೌರವ'


ಇದಕ್ಕೂ ಮುನ್ನ ಪರಿಸರ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ, ಪ್ರಸ್ತುತ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಕೆ.ಎಸ್.ಗುರುಮೂರ್ತಿಯವರಿಗೆ ಶ್ರೀಮಠದ ವತಿಯಿಂದ ಚಾತುರ್ಮಾಸ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.


“ಚಾತುರ್ಮಾಸ್ಯ ಪ್ರತಿಯೊಬ್ಬರೂ ಮನಸ್ಸು, ಆತ್ಮ ಶುದ್ಧಿಗಾಗಿ ಮಾಡಬೇಕಾದ ಮಹಾನ್ ವ್ರತ. ಆದರೆ ಇಂದು ಲೋಕಕಲ್ಯಾಣಕ್ಕಾಗಿ ಮಠಾಧಿಪತಿಗಳು ಈ ವ್ರತ ಕೈಗೊಳ್ಳುತ್ತಿದ್ದಾರೆ. ಪರಮಪೂಜ್ಯರ ಚಾತುರ್ಮಾಸ್ಯ ಸಮಸ್ತ ಸಮಾಜದ ಚಾತುರ್ಮಾಸ್ಯ. ಚಾತುರ್ಮಾಸ್ಯವನ್ನು ಸಮಸ್ತ ಸಮಾಜಮುಖಿ ವ್ರತವಾಗಿ ಪೂಜ್ಯರು ಪರಿವರ್ತಿಸಿದರು” ಎಂದು ಪ್ರಶಸ್ತಿ ಸ್ವೀಕರಿಸಿದ ಕೆ.ಎಸ್.ಗುರುಮೂರ್ತಿ ಬಣ್ಣಿಸಿದರು. ಗುರುಕೃಪೆಯೇ ನನ್ನ ಸಾಮಾಜಿಕ ಕಾರ್ಯಗಳಿಗೆ ಸ್ಫೂರ್ತಿ ಎಂದು ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಗೋಕರ್ಣ ಶ್ರೀಮಠದ ವಶಕ್ಕೆ ಮತ್ತೆ ಬಂದ ಬಳಿಕ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಪಾರದರ್ಶಕ ವ್ಯವಸ್ಥೆ ಜಾರಿಗೆ ಬಂದಿದೆ. ಇಡೀ ಮಠದ ವ್ಯವಸ್ಥೆಯಲ್ಲಿ ಪಾರದರ್ಶಕ ವ್ಯವಸ್ಥೆಯಿದ್ದು, ಇದು ಸಮಸ್ತ ಸಮಾಜಕ್ಕೆ ಮಾದರಿ ಎಂದರು.
ಅಪರ್ಣಾ ಗುರುಮೂರ್ತಿ, ಗಂವ್ಹಾರ ಮಠದ ಶ್ರೀ ಪಾಂಡುರಂಗ ಮಹಾರಾಜ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ ದಂಪತಿ ಸಭಾಪೂಜೆ ನೆರವೇರಿಸಿದರು. ವಿದ್ವಾನ್ ಜಗದೀಶ್ ಶರ್ಮಾ ಸಂಪ ಅಭಿನಂದನಾ ಭಾಷಣ ಮಾಡಿದರು. ಚಾತುರ್ಮಾಸ್ಯ ಸಮಿತಿ ಕೋಶಾಧ್ಯಕ್ಷ ಸುಬ್ರಾಯ ಭಟ್ ಮೂರೂರು ಲೆಕ್ಕಪತ್ರ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್ ಅವಲೋಕನ ನೆರವೇರಿಸಿದರು. ಅರುಣ್ ಹೆಗಡೆ ಅಭಿನಂದನಾ ಪತ್ರ ವಾಚಿಸಿದರು. ಗಣೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು.

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.


ಇದಕ್ಕೂ ಮುನ್ನ ಪರಮಪೂಜ್ಯರು ಗಂಗಾವಳಿ ನದಿ ದಾಟುವ ಮೂಲಕ ಸೀಮೋಲ್ಲಂಘನೆ ಕೈಗೊಂಡರು. ಮಲ್ಲಿಕಾರ್ಜುನ ದೇವಾಲಯದಲ್ಲಿ ನಡೆದ ಶ್ರೀಚಂಡಿಕಾ ಹವನದ ಪೂರ್ಣಾಹುತಿಯಲ್ಲೂ ಪರಮಪೂಜ್ಯರು ಪಾಲ್ಗೊಂಡರು.