ಶಿಕ್ಷಣ ಇಲಾಖೆ 2020-21 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಪಡಿಸಿದೆ. ಹೊನ್ನಾವರ ತಾಲೂಕಿನ ಗ್ರಾಮೀಣ ಪ್ರದೇಶವಾದ ಮಲ್ಲಾಪುರದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಗುರುಪ್ರಸಾದ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ಎಮ್. ಟಿ.ಗೌಡರವರಿಗೆ ಸಲ್ಲಿಕೆಯಾದದ್ದು ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದೆ.
ಸುಮಾರು 35 ವರ್ಷಗಳ ಸುದೀರ್ಘ ಅವಧಿಯ ಶೈಕ್ಷಣಿಕ ಕೈಂಕರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಾ, ವಿದ್ಯಾರ್ಥಿಗಳ ಸರ್ವತೋಮುಖ ವಿಕಾಸಕ್ಕೆ ಸರ್ವ ಪ್ರಯತ್ನ ಮಾಡಿದ ಹೆಜ್ಜೆಯ ಗುರುತಗಳನ್ನು ಕಾಣಬಹುದು.
ಮುಖ್ಯ ಅಧ್ಯಾಪಕರಾದ ನಂತರ ಶಾಲೆಯ ಭೌತಿಕ ವಿಕಾಸಕ್ಕೆ ಪ್ರಥಮ ಆದ್ಯತೆ ನೀಡಿ, ಕ್ರಿಯಾಯೋಜನೆ ರೂಪಿಸಿ ಶಾಲೆಗೆ ಹೊಸ ಆಯಾಮವನ್ನು ತಂದಿದ್ದಾರೆ. ಒಂದು ಕೋಟಿ 86 ಲಕ್ಷ ರೂಪಾಯಿಯನ್ನು ಶಿಕ್ಷಣ ಅಭಿಮಾನಿಗಳಿಂದ ಸಂಗ್ರಹಿಸಿ ಜಿಲ್ಲೆಯಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸಿದ್ದಾರೆ.ಕ್ರೀಡೆಯಲ್ಲಿ ಮೂರುಸಲ ರಾಷ್ಟ್ರ ಮಟ್ಟದವರೆಗೆ ವಿದ್ಯಾರ್ಥಿಗಳು ಭಾಗವಹಿಸಿದ್ದು,ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟದವರೆಗೆ ಭಾಗವಹಿಸಿದ್ದು ಇವರ ಯಜಮಾನತ್ವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.
ಸ್ವತಃ ಕ್ರೀಡಾಪಟುಗಳಾಗಿರುವ ಇವರು ಉತ್ತಮ ವಾಗ್ಮಿ ಗಳು ಆಗಿದ್ದಾರೆ. ಹಿಂದಿನ ಉಪನಿರ್ದೇಶಕರಾದ ಶ್ರೀ ಪಿ.ಕೆ. ಪ್ರಕಾಶ್ ರವರು ಮುಖ್ಯಾಧ್ಯಾಪಕರ ಸಭೆಯಲ್ಲಿ ಈ ವಿಷಯವನ್ನು ಶ್ಲಾಘಿಸಿದ್ದು ಅನನ್ಯ. ಅಂತೆಯೇ ಧಾರವಾಡದ ಆಯುಕ್ತರ ಕಚೇರಿಯ ನಿರ್ದೇಶಕರಾದ ಡಾ ಬಿ.ಕೆ.ಎಸ್. ವರ್ಧನ ರವರು ಶಾಲೆಗೆ ಭೇಟಿ ನೀಡಿ ಗುರುಪ್ರಸಾದ್ ಪ್ರೌಢಶಾಲೆಯ ಎಲ್ಲ ಭೌತಿಕ ಪರಿಕರಗಳನ್ನು ನೋಡಿ, ಆಧುನಿಕ ತಂತ್ರಜ್ಞಾನದ ಅಳವಡಿಕೆಯ ರೀತಿಯನ್ನು ಶ್ಲಾಘಿಸಿದ್ದಾರೆ. ಶ್ರೀ ಎಂ.ಟಿ. ಗೌಡರವರು ಶಾಲೆಯ ವಿಕಾಸದ ಜೊತೆ ಜೊತೆಗೆ ಸಮಾಜಮುಖಿ ಕಾರ್ಯಕ್ರಮವನ್ನು ಕೂಡ ಸಂಘಟಿಸಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಶಿಸ್ತುಬದ್ಧ ಕಲಿಕೆಗೆ ಉತ್ತೇಜನ ನೀಡಿದ್ದಾರೆ. ಎಸೆಸೆಲ್ಸಿ ಶೈಕ್ಷಣಿಕ ಫಲಿತಾಂಶವು ಗುಣಮಟ್ಟದ್ದಾಗಿರುವುದುರಲ್ಲಿ ಕಾಳಜಿ ವಹಿಸಿದ್ದಾರೆ. ಒಟ್ಟಾರೆಯಾಗಿ ಶ್ರೀಯುತರು ಶಾಲೆಯ ಭೌತಿಕ, ಬೌದ್ಧಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಂದ ಶಾಲೆಯ ಶ್ರೇಯಸ್ಸನ್ನು ಹೆಚ್ಚಿಸಿದ್ದಾರೆ. ಶಾಲೆಯ ಸುವರ್ಣ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಸಂಘಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇಂತಹ ನಿಸ್ಪ್ರಹ ಶಿಸ್ತುಬದ್ಧ ಶಿಕ್ಷಣ ಪ್ರೇಮಿಗೆ ಪ್ರಶಸ್ತಿ ಸಂದಾಯವಾಗಿರುವುದು ಶ್ಲಾಘನೀಯ. ಶ್ರೀ ಎಂ.ಟಿ. ಗೌಡರಿಗೆ ಬಂದ ಪ್ರಶಸ್ತಿ ಶಿಕ್ಷಣ ಅಭಿಮಾನಿಗಳಿಗೆ ಸಂತೋಷ ತಂದಿದೆ.