ಕುಮಟಾ : ಕರ್ನಾಟಕ ಯಕ್ಷಗಾನ ಅಕಾಡೆಮಿಯು 2019ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಘೊಷಿಸಿದೆ. ಜಿಲ್ಲೆಯ ಮೂವರಿಗೆ ಹಾಗೂ ಒಂದು ಕೃತಿಗೆ ಪ್ರಶಸ್ತಿ ಲಭಿಸಿದೆ.
ಅಂಕೋಲಾದ ಡಾ. ರಾಮಕೃಷ್ಣ ಗುಂದಿ ಅವರಿಗೆ ಗೌರವ ಪ್ರಶಸ್ತಿ, ಮೂರೂರು ರಾಮಚಂದ್ರ ಹೆಗಡೆ ಅವರಿಗೆ ಪ್ರಸಾಧನ ಪ್ರಶಸ್ತಿ, ಎಂ.ಎನ್. ಹೆಗಡೆ ಹಳವಳ್ಳಿ ಅವರಿಗೆ ‘ಯಕ್ಷಸಿರಿ’ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿರುವ ‘ವೀರಾಂಜನೇಯ ವೈಭವ’ ಕೃತಿಗೆ ಪುಸ್ತಕ ಬಹುಮಾನ ದೊರೆತಿದೆ.
ಪ್ರಸಿದ್ಧ ಅರ್ಥಧಾರಿ, ನಿವೃತ್ತ ಉಪನ್ಯಾಸಕ ಅವರಿಗೆ ‘ಯಕ್ಷಸಿರಿ’ ಪ್ರಶಸ್ತಿ ಲಭಿಸಿದೆ.
ಎಂ.ಎನ್. ಹೆಗಡೆ ಹಳವಳ್ಳಿ: ಹಳವಳ್ಳಿಯವರಾದ ಎಂ.ಎನ್. ಹೆಗಡೆ ಅವರು ಪಟ್ಟಣದ ವೈಟಿಎಸ್ಎಸ್ ಕಾಲೇಜಿನಲ್ಲಿ ಗಣಿತ ಉಪನ್ಯಾಸಕರಾಗಿ 33 ವರ್ಷ ಸೇವೆ ಸಲ್ಲಿಸಿದ್ದಾರೆ. ಸುಮಾರು 50 ವರ್ಷಗಳಿಂದ ತಾಳಮದ್ದಲೆ ಅರ್ಥ ಧಾರಿಗಳಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ತಂದೆ ನರಸಿಂಹ ಹೆಗಡೆ ತಾಳಮದ್ದಲೆಯ ಅರ್ಥಧಾರಿಯಾಗಿ ರುವುದರಿಂದ ಯಕ್ಷಗಾನ, ತಾಳಮದ್ದಲೆಯ ವಾತಾವರಣದಲ್ಲೇ ಬೆಳೆದರು. ಉಪನ್ಯಾಸಕ ರಾದ ನಂತರ ವೃತ್ತಿಯ ಜತೆಯಲ್ಲಿ ಪ್ರವೃತ್ತಿಯಾಗಿ ಅರ್ಥಗಾರಿಕೆಯನ್ನೂ ನಡೆಸಿಕೊಂಡು ಬಂದರು. ದೂರದ ಊರುಗಳಿಗೆ ಹೋಗಿ ರಾತ್ರಿಯಿಂದ ಬೆಳಗಿನವರೆಗೆ ತಾಳಮದ್ದಲೆ ಹೇಳಿ, ಬೆಳಗ್ಗೆ ಎಂದಿನಂತೆ ಕಾಲೇಜಿಗೆ ಬಂದು ಪಾಠ ಮಾಡುತ್ತಿದ್ದರು.
ಸರಳವಾದ ಶಬ್ದ ಪ್ರಯೋಗ, ಪಾತ್ರದ ಔಚಿತ್ಯ ಮೀರದೇ ಮೇಲ್ಮಟ್ಟದ ಆಲೋಚನಾ ಲಹರಿಯ ಮೂಲಕ ಪಾತ್ರವನ್ನು ಚಿತ್ರಿಸುವುದು ಎಂ.ಎನ್. ಹೆಗಡೆಯವರ ವಿಶೇಷತೆ. ‘ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ನನ್ನ ಇಷ್ಟು ವರ್ಷಗಳ ಶ್ರಮವನ್ನು ಗುರುತಿಸಿ, ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನಮ್ಮಂತಹ ಕಲಾವಿದರನ್ನು ಗುರುತಿಸಿ, ಪುರಸ್ಕಾರ ನೀಡಿರುವುದಕ್ಕೆ ಯಕ್ಷಗಾನದ ಅಕಾಡೆಮಿ ಹಾಗೂ ಅಧ್ಯಕ್ಷರಿಗೆ ಆಭಾರಿಯಾಗಿದ್ದೇನೆ ಎಂದು ಎಂ.ಎನ್. ಹೆಗಡೆ ಅವರು ಹೇಳಿದ್ದಾರೆ.
ರಾಮಚಂದ್ರ ಕೃಷ್ಣ ಹೆಗಡೆ: ಕುಮಟಾ ತಾಲೂಕಿನ ಮೂರೂರಿನ ಹುಳಸೇಮಕ್ಕಿ ನಿವಾಸಿ ರಾಮಚಂದ್ರ ಕೃಷ್ಣ ಹೆಗಡೆ ಅವರು ಕೃಷಿಕ ಕುಟುಂಬದಿಂದ ಬಂದವರು. ಕೇವಲ ನಾಲ್ಕನೇ ತರಗತಿ ಕಲಿತಿರುವ ಹೆಗಡೆ ಅವರು ತಮ್ಮ 20 ರ ಹರೆಯದಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ಪ್ರವೇಶಿಸಿ ಕುಮಟಾ, ಹೆಗಡೆ ಹಾಗೂ ಇತರ ಮೇಳಗಳಲ್ಲಿ ಕಲಾಸೇವೆ ಮಾಡಿದ್ದಾರೆ. ಹವ್ಯಾಸಿಯಾಗಿ 72 ರ ಇಳಿವಯಸ್ಸಿನಲ್ಲೂ ಉತ್ಸಾಹದ ಕಣಿಯಾಗಿದ್ದಾರೆ. ಯಕ್ಷಗಾನದ ವೇಷ ಭೂಷಣ ತಯಾರಿಕೆಯಲ್ಲಿ ಸಿದ್ಧಹಸ್ತರು. ಪ್ರಸಾಧನದ ಜೊತೆಗೆ ಯಕ್ಷಗಾನ ಕಲಾ ಗುರುವಾಗಿ ನೂರಾರು ಕಲಾವಿದರನ್ನು ತಯಾರು ಮಾಡಿದ್ದಾರೆ. ಸ್ವತಃ ವೇಷಧಾರಿಯಾಗಿ ಪ್ರಸಿದ್ಧರು. ಭಾಗವತಿಕೆ, ಮೃದಂಗ, ಚಂಡೆ, ನುಡಿಸುವ ಜತೆಗೆ ಅದನ್ನು ತಯಾರಿಸುವಲ್ಲೂ ನಿಪುಣರು. ‘ಸುಮಾರು 6 ದಶಕದ ಕಠಿಣ ಕಲಾಸೇವೆಗೆ ಅಂತೂ ಪ್ರಶಸ್ತಿಯ ಗೌರವ ಲಭಿಸಿದ್ದು ಖುಷಿ ಹಾಗೂ ಸಾರ್ಥಕತೆ ತಂದಿದೆ’ ಎಂದು ಹೆಗಡೆ ಅವರು ತಿಳಿಸಿದ್ದಾರೆ.
ಡಾ.ರಾಮಕೃಷ್ಣ ಗುಂದಿ: ಕಾರವಾರ ದಿವೇಕರ್ ಕಾಲೇಜ್ನ ಪ್ರಾಂಶುಪಾಲರಾಗಿ ನಿವೃತ್ತರಾಗಿರುವ ನಾಡಿನ ಹಿರಿಯ ಸಾಹಿತಿ ಅಂಕೋಲಾ ತಾಲೂಕಿನ ನಾಡು ಮಾಸ್ಕೇರಿಯ ಡಾ. ಆರ್.ಜಿ.ಗುಂದಿ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಡಾ.ರಾಮಕೃಷ್ಣ ಗುಂದಿ ಅವರು ತಮ್ಮ ವೃತ್ತಿಯ ಜತೆಗೆ ಯಕ್ಷಗಾನ ಕಲಾವಿದರಾಗಿ ಪ್ರಸಿದ್ಧರಾದವರು.
ಯಕ್ಷಗಾನ ಕಲಾವಿದರು ಹಾಗೂ ಭಾಗವತರಾಗಿದ್ದ ತಮ್ಮ ತಂದೆಯಿಂದಲೇ ಯಕ್ಷಗಾನ ಅಭ್ಯಾಸ ಮಾಡಿದ ರಾಮಕೃಷ್ಣ ಅವರು 7ನೇ ತರಗತಿಯಲ್ಲೇ ಬಣ್ಣ ಹಚ್ಚಿದ್ದರು. ಯಾವುದೇ ಶಾಲೆಗೆ ಹೋಗಿ ಶಾಸ್ತ್ರೀಯವಾಗಿ ಕಲಿಯದೇ ಇದ್ದರೂ ಮೇಳದ ಆಟಗಳನ್ನೇ ನೋಡಿ ತಮ್ಮ ಕೌಶಲ ಬೆಳೆಸಿಕೊಂಡರು. 1975 ರಲ್ಲಿ ಅಂಕೋಲಾದ ಗೋಖಲೆ ಸೆಂಟನರಿ ಕಾಲೇಜ್ನಲ್ಲಿ ಪ್ರಾಧ್ಯಾಪಕ ರಾಗಿ ವೃತ್ತಿ ಆರಂಭಿಸಿದ ನಂತರ ಸುತ್ತಲಿನ ಹಳ್ಳಿಗಳಲ್ಲಿ ನಿರಂತರ ಪಾತ್ರ ಮಾಡುತ್ತಿದ್ದರು. ಗಧಾಯುದ್ಧದ ಕೌರವನ ಪಾತ್ರಕ್ಕೆ ಪ್ರಸಿದ್ಧರಾಗಿದ್ದ ಅವರು ಈ ಪಾತ್ರದಲ್ಲಿ ಸಾವಿರಕ್ಕೂ ಅಧಿಕ ಪ್ರದರ್ಶನ ನೀಡಿದ್ದಾರೆ. ಮಹಾಸತಿ ಅರುಂಧತಿ, ವಾಲಿ ಜೀವನ ಚರಿತ್ರೆ, ನಾಗಲೋಕ ವಿಜಯ ಎಂಬ ಮೂರು ಪ್ರಸಂಗಗಳನ್ನು ಅವರು ಬರೆದಿದ್ದು, ನಾಗಲೋಕ ವಿಜಯ ಪ್ರಸಂಗ ಮೇಳಗಳಲ್ಲಿ ಪ್ರದರ್ಶನ ಕಂಡಿದೆ. ಇಷ್ಟೇ ಅಲ್ಲದೆ, ಅವರು ಸಾಹಿತ್ಯ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದ್ದಾರೆ. ಆಗೇರ ಸಂಸ್ಕೃತಿ ಕುರಿತು ಪಿಎಚ್.ಡಿ ಪ್ರಬಂಧ ರಚಿಸಿದ್ದಾರೆ.