ಕುಮಟಾ: ಇಲ್ಲಿಯ ರೋಟರಿ ಕ್ಲಬ್ ತಾಲೂಕಿನ ಔಷಧಿ ವ್ಯಾಪಾರಿಗಳಿಗೆ ಕೊರೊನಾ ಸಂದರ್ಭದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ, ಅವರನ್ನು ‘ಕೊರೊನಾ ವಾರಿಯರ್ಸ್’ ಎಂದು ಪರಿಗಣಿಸಿ ಗೌರವಿಸಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊನ್ನಾವರದ ಫಾರ್ಮಾಸಿಸ್ಟ್ ಮಹೇಶ ಕಲ್ಯಾಣಪುರ, ಕೊರೊನಾ ಸಂದರ್ಭದಲ್ಲಿ ವೈದ್ಯರು, ದಾದಿಯರು, ಔಷಧಿ ವ್ಯಾಪಾರಿಗಳು, ವಿತರಕರು ಸಮಾನ ಗೌರವಕ್ಕೆ ಅರ್ಹರಾಗಿದ್ದಾರೆ. ಕ್ಷಿಷ್ಠ ಸಮಯದಲ್ಲೂ ಜನರ ಆರೋಗ್ಯದ ದೃಷ್ಠಿಯಿಂದ ಅರ್ಹನಿಸಿ ದುಡಿಯುತ್ತಿರುವ ತಮ್ಮ ಸಹೋದ್ಯೋಗಿಗಳ ಸೇವೆ ನಿಜಕ್ಕೂ ಪ್ರಶಂಸನೀಯ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಒಗ್ಗಿಕೊಳ್ಳುವ ಅನಿರ್ವಾಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಔಷಧಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ನಮ್ಮ ಸಿಬ್ಬಂದಿಗಳ ಆರೋಗ್ಯ ರಕ್ಷಣೆ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಎಂದು ಕುಮಟಾ ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಶೀಯೇಶನ್ ಅಧ್ಯಕ್ಷ ಪ್ರಕಾಶ ನಾಯ್ಕ ನುಡಿದರು. ಔಷಧಿ ವಿತರಕ ಹಾಗೂ ರೋಟರಿ ಕಾರ್ಯದರ್ಶಿ ಅತುಲ್ ಕಾಮತ ಕೊರೊನಾ ಸಂದರ್ಭದಲ್ಲಿ ಸರಕಾರ, ಸಮಾಜ ಮತ್ತು ಔಷಧಿ ಕಂಪನಿಗಳೊಂದಿಗಿನ ಸಹಯೋಗದ ಸವಾಲುಗಳನ್ನು ಸಭೆಯ ಮುಂದೆ ತೆರೆದಿಟ್ಟರು. ಪ್ರಾರಂಭದಲ್ಲಿ ರೋಟರಿ ಅಧ್ಯಕ್ಷ ಶಶಿಕಾಂತ ಕೋಳೇಕರ ಸ್ವಾಗತಿಸಿ, ಆಶಯವನ್ನು ವ್ಯಕ್ತಪಡಿಸಿದರು. ಎನ್.ಆರ್.ಗಜು ಪರಿಚಯಿಸಿದರು. ರೋಟರಿಯ ಡಾ.ದೀಪಕ ಡಿ.ನಾಯಕ, ಜಯಶ್ರೀ ಕಾಮತ, ಎಸ್.ವಿ.ಹೆಗಡೆ ನಂದೈಯನ್, ಅಜಿತ್ ಭಟ್, ಆರ್.ಜಿ.ಗುನಗಿ, ವಿನಾಯಕ ಭಟ್ಟ, ಅಕ್ಬರ್ ಮುಲ್ಲಾ, ಮೌಸಿನ್ ಖಾಜಿ, ಡಾ. ನಮೃತಾ ಶಾನಭಾಗ, ಆರ್.ಟಿ.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. 28 ಔಷಧಿ ಅಂಗಡಿ ಮಾಲಕರು ಪಾಲ್ಗೊಂಡು ಪ್ರಶಸ್ತಿ ಪತ್ರ ಸ್ವೀಕರಿಸಿದರು.