ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸಬೇಕು ಮತ್ತು ಭಾರತೀಯ ಗೋ ತಳಿಗಳ ಸಂವರ್ಧನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯದ ಒಂದು ಕೋಟಿಗೂ ಅಧಿಕ ಕನ್ನಡಿಗರು ಸಹಿ ಮಾಡಿದ ಹಕ್ಕೊತ್ತಾಯ ಪತ್ರಗಳನ್ನು ಶ್ರೀರಾಮಚಂದ್ರಾಪುರ ಮಠ ಸಂಚಾಲಿತ ಭಾರತೀಯ ಗೋ ಪರಿವಾರ ವತಿಯಿಂದ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಸಲ್ಲಿಸಲಾಯಿತು.


ಈ ತಿಂಗಳ 21ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಆಂಗೀಕರಿಸಬೇಕು ಎಂದು ಒತ್ತಾಯಿಸಲಾಯಿತು. ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಸೇರಿದಂತೆ ನಾಡಿನ 2000ಕ್ಕೂ ಹೆಚ್ಚು ಮಂದಿ ಸಂತರು, ಭಾರತೀಯ ಗೋ ಪರಿವಾರ ಹಾಗೂ ಶ್ರೀಮಠದ ಶಾಸನತಂತ್ರ ಪದಾಧಿಕಾರಿಗಳು ಸ್ವರಕ್ತದಲ್ಲಿ ಬರೆದ ಹಕ್ಕೊತ್ತಾಯ ಪತ್ರಗಳನ್ನೂ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಯಿತು.
ಪಕ್ಷಭೇದ, ಧರ್ಮಭೇದ ಮರೆತು ಹಲವು ಮಂದಿ ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಹೋರಾಟಗಾರರು, ಗೋಪ್ರೇಮಿಗಳು, ಧರ್ಮಗುರುಗಳು ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳಿಗೆ ಸಹಿ ಮಾಡಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲೇ ಗೋಹತ್ಯೆ ನಿಷೇಧಕ್ಕೆ ಇಷ್ಟೊಂದು ಬೃಹತ್ ಸಂಖ್ಯೆಯ ಜನ ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಿರುವುದು ಇದೇ ಮೊದಲು. ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಾಡಿನಾದ್ಯಂತ ಅಭಯಾಕ್ಷರ ಅಭಿಯಾನ ಮತ್ತು ಅಭಯ ಯಾತ್ರೆ ಕೈಗೊಂಡು ಒಂದು ಕೋಟಿಗೂ ಅಧಿಕ ಅಭಯಾಕ್ಷರಗಳನ್ನು ಸಂಗ್ರಹಿಸಲಾಗಿತ್ತು. ಬಳಿಕ ಕೋಲಾರ ಜಿಲ್ಲೆ ಮಾಲೂರು ರಾಘವೇಂದ್ರ ಗೋ ಆಶ್ರಮ ಆವರಣದಲ್ಲಿ ಅಭಯ ಮಂಗಲ ಕಾರ್ಯಕ್ರಮ ಆಯೋಜಿಸಲಾಗಿತ್ತು.

RELATED ARTICLES  ಗಗನಕ್ಕೆರುತ್ತಿರುವ ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಕೆ ಅಸಾಧ್ಯ: ಸಿಎಂ ಎಚ್ ಡಿ ಕುಮಾರಸ್ವಾಮಿ.


ಆ ಬಳಿಕ ನಾಡಿನ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿಗಳಿಗೆ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೋಟಿ ಸಂಖ್ಯೆಯ ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿತ್ತು. ಮಂಗಳವಾರ ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿಯಲ್ಲಿ ಭೇಟಿ ಮಾಡಿದ ಭಾರತೀಯ ಗೋ ಪರಿವಾರದ ಮಾರ್ಗದರ್ಶಕರಾದ ಡಾ.ವೈ.ವಿ.ಕೃಷ್ಣಮೂರ್ತಿ, ಡಾ.ಶಾರದಾ ಜಯಗೋವಿಂದ್ ಮತ್ತಿತತರು ಸಾಂಕೇತಿಕವಾಗಿ ಕೋಟಿ ಕನ್ನಡಿಗರ ಒತ್ತಾಸೆ ಬಗ್ಗೆ ಮುಖ್ಯಮಂತ್ರಿಗಳಿಗೆ ನೆನಪಿಸಿದರು.
ಅಭಯ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಡಾ.ಸುಬ್ರಮಣಿಯನ್ ಸ್ವಾಮಿ ಆ ಬಳಿಕ ಕೋಟಿ ಕನ್ನಡಿಗರ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಖಾಸಗಿ ಮಸೂದೆ ಮಂಡಿಸಿದರು. ಪಕ್ಷಬೇಧ ಮರೆತು ಇದಕ್ಕೆ ಬೆಂಬಲ ವ್ಯಕ್ತವಾದಾಗ, ಗೋಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಕೇಂದ್ರ ಸರ್ಕಾರ ಮಸೂದೆ ವಾಪಾಸು ಪಡೆಯುವಂತೆ ಸುಬ್ರಮಣಿಯನ್‍ಸ್ವಾಮಿಯವರ ಮನವೊಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

RELATED ARTICLES  ಎದೆನೋವಿನ ಹಿನ್ನೆಲೆಯಲ್ಲಿ ನಾದಬ್ರಹ್ಮ ಹಂಸಲೇಖ ಆಸ್ಪತಗೆ ದಾಖಲು.