ಕುಮಟಾ: ತಾಲೂಕಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಯುವ ಸೇವಾವಾಹಿನಿಯ ನೇತೃತ್ವದಲ್ಲಿ ಪ್ರತಿ ಅಧಿಕಮಾಸದಲ್ಲಿ ವಿನೂತನ ಕಾರ್ಯಕ್ರಮಗಳು ಹಮ್ಮಿಕೊಳ್ಳಲ್ಪಡುತ್ತಿದ್ದು, ಈ ಬಾರಿ ವಿಶಿಷ್ಟವೂ, ಪುಣ್ಯಪ್ರದವೂ, ಆರೋಗ್ಯಕರವೂ ಆಗಿರುವ 33ಸಾವಿರ ದೀರ್ಘ ಪ್ರದಕ್ಷಿಣಾ ಅಭಿಯಾನವನ್ನು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಕಲ್ಪಿಸಲಾಗಿದೆ.
ಸಮಸ್ತ ಭಕ್ತ ಭಾವಿಕ ರಿಂದ ನೆರವೇರುವ ಈ ಕಾರ್ಯಕ್ರಮದಲ್ಲಿ ಸಮಸ್ತರು ಭಾಗಿಯಾಗಿ ಶ್ರೇಯವನ್ನು ಪಡೆಯಬೇಕೆಂದು ಯುವವಾಹಿನಿಯ ಪದಾಧಿಕಾರಿಗಳು ಅಭಿಯಾನದ ಫಲಶೃತಿ ಹಾಗೂ ಪ್ರಚಾರದ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ವಿನಂತಿಸಿದ್ದಾರೆ.
ಈ ಅಭಿಯಾನವು ನಾಳೆಯಿಂದ ಪ್ರಾರಂಭವಾಗುವ ಅಧಿಕ ಆಶ್ವೀಜ ಮಾಸದ ಪ್ರತಿಪದೆಯಿಂದ ಅಮಾವಾಸ್ಯೆಯವರೆಗಿನ 29 ದಿನಗಳ ನಿರರ್ಗಳ ಪ್ರದಕ್ಷಿಣ ಸಂಕಲ್ಪವಾಗಿದೆ.
ಈ ಪುಣ್ಯತಮ ಕಾರ್ಯದ ನಿಯಮಾವಳಿಗಳೆಂದರೆ ಪ್ರದಕ್ಷಿಣೆಯನ್ನು ದೇವಸ್ಥಾನದ ಬಾಗಿಲು ತೆರೆದಿರುವಾಗ ಮಾತ್ರ ತೆಗೆಯುವುದು, ಸರ್ಕಾರದ ಮಾರ್ಗಸೂಚಿಯಂತೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧಾರಣೆ, ಪ್ರತಿದಿನ ತಮ್ಮ ಯಥಾ ಶಕ್ತಿ ತೆಗೆದ ಪ್ರದಕ್ಷಿಣೆಯ ಸಂಖ್ಯೆಯನ್ನು ನಿಗದಿತ ಪುಸ್ತಕದಲ್ಲಿ ನಮೂದಿಸುವುದರ ಜೊತೆಯಲ್ಲಿ ಪ್ರದಕ್ಷಿಣೆಯಲ್ಲಿ ದೇವರ ನಾಮಸ್ಮರಣೆಯನ್ನು ಕೈಗೊಳ್ಳುವುದೇ ಆಗಿದೆ.