ಯಲ್ಲಾಪುರ: ರೈತರ ಆರ್ಥಿಕ ಪುನಶ್ಚೇತನ ಹಾಗೂ ಹೊಸ ಬೆಳೆಗಳು, ಹೊಸ ತಳಿಗಳನ್ನು ಪರಿಚಯಿಸುವ ಉದ್ದೇಶದಿಂದ ಸರ್ಕಾರ ಗುಚ್ಛಗ್ರಾಮ ಯೋಜನೆ ಆರಂಭಿಸಿದ್ದು, ರೈತರು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಸೂಳಗಾರ ಹಿ.ಪ್ರಾ.ಶಾಲೆಯ ಆವಾರದ ಎಲ್‍ಎಸ್‍ಎಂಪಿ ಗೋಡಾನ್‍ನಲ್ಲಿ ತೋಟಗಾರಿಕಾ ಇಲಾಖೆ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆಯಡಿ ರೈತರಿಗಾಗಿ ಹಮ್ಮಿಕೊಂಡಿದ್ದ ಕಾಳುಮೆಣಸು ಬೆಳೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಗುಚ್ಛ ಗ್ರಾಮವಾಗಿ ಗುರುತಿಸಲ್ಪಟ್ಟ ಊರಿನ 21 ಹೆಕ್ಟೆರ್ ಪ್ರದೇಶದಲ್ಲಿ 8 ಲಕ್ಷ ರೂ ವೆಚ್ಚದಲ್ಲಿ ತೋಟಗಾರಿಕಾ ಅಭಿವೃದ್ಧಿ ಮಾಡಲಾಗುತ್ತದೆ. ರೈತರಿಗೆ ಅಧಿಕಾರಿಗಳು ಕಾಲಕಾಲಕ್ಕೆ ಮಾರ್ಗದರ್ಶನ ಮಾಡುತ್ತಾರೆ ಎಂದರು.
ಕಳೆದ 4 ವರ್ಷಗಳಿಂದ ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದ್ದು, ಈ ಬಾರಿಯೂ ಬರಗಾಲದ ಛಾಯೆ ಆವರಿಸತೊಡಗಿದೆ. ಬರಗಾಲ ಪೀಡಿತ ತಾಲೂಕು ಘೋಷಣೆಗೆ ಈ ಹಿಂದೆ ಇದ್ದ ಮಾನದಂಡವನ್ನು ಕೇಂದ್ರ ಸರ್ಕಾರ ಬದಲಿಸಿದ್ದು, ನೂತನ ನಿಯಮದನ್ವಯ ರಾಜ್ಯದಲ್ಲಿ 4-5 ತಾಲೂಕುಗಳನ್ನೂ ಬರಗಾಲಪೀಡಿತವೆಂದು ಘೋಷಿಸಿ, ವಿಶೇಷ ಅನುದಾನಗಳನ್ನು ನೀಡಲು ಸಾಧ್ಯವಿಲ್ಲ. ಕಾರಣ ನಿಯಮಗಳನ್ನು ಸಡಿಲಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಕೇಂದ್ರ ಸರ್ಕಾರದ ಮನವೊಲಿಸಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದರು.
ರಾಜ್ಯ ಸರ್ಕಾರ ಸಹಕಾರಿ ಸಂಘಗಳಲ್ಲಿ ರೈತರು ಮಾಡಿದ 50,000 ರೂ ಸಾಲಮನ್ನಾ ಮಾಡಿದ್ದು, ಅದರಂತೆ ತಾಲೂಕಿನಲ್ಲಿ ಒಟ್ಟು 27 ಕೋಟಿ ರೂ ಸಾಲಮನ್ನಾ ಆಗಿದೆ. ಇದು ರೈತರ ಸಂಪೂರ್ಣ ಸಂಕಷ್ಟವನ್ನು ದೂರ ಮಾಡದೇ ಇದ್ದರೂ, ಅಲ್ಪಮಟ್ಟಿಗೆ ಸಹಾಯ ನೀಡಿದೆ ಎಂದರು.
ಅನಂತ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಗುಮ್ಮಾನಿ ಮಾತನಾಡಿ, ನಿರಂತರವಾಗಿ ಕೃಷಿ ನಡೆಸಿಕೊಂಡು ಬರುವ ರೈತರನ್ನು ಕೃಷಿ ಕೈಬಿಡುವುದಿಲ್ಲ. ಗುಚ್ಛಗ್ರಾಮವಾಗಿ ಆಯ್ಕೆಯಾದ ಸೂಳಗಾರ ಭಾಗದ ರೈತರು ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನಂದೊಳ್ಳಿ ಗ್ರಾ.ಪಂ ಅಧ್ಯಕ್ಷೆ ನಾಗಶ್ರೀ ಭಾಗ್ವತ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ ಸದಸ್ಯ ನಾಗರಾಜ ಕವಡಿಕೆರೆ, ಗ್ರಾ.ಪಂ ಉಪಾಧ್ಯಕ್ಷ ಎಂ. ಎನ್. ಭಟ್ಟ, ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಮಕೃಷ್ಣ ಭಟ್ಟ ಬಿದ್ರೇಪಾಲ, ಎಲ್‍ಎಸ್‍ಎಂಪಿ ನಿರ್ದೇಶಕ ಗಣಪತಿ ಭಟ್ಟ ತಟ್ಟಿಗದ್ದೆ, ನಾಗೇಶ ಹೆಗಡೆ ಬಾಳೆಗದ್ದೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಗೇರ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಿರಸಿಯ ಹಾರ್ಟಿಕ್ಲಿನಿಕ್‍ನ ವಿಷಯತಜ್ಞ ವಿ. ಎಂ. ಹೆಗಡೆ ಹಾಗೂ ಪ್ರಗತಿಪರ ಕೃಷಿಕ ಆರ್.ಎಂ.ಹೆಗಡೆ ರೈತರಿಗೆ ಕಾಳುಮೆಣಸು ಬೆಳೆ ಕುರಿತು ಮಾಹಿತಿ ನೀಡಿದರು.