ಬೆಂಗಳೂರು: ಗ್ರಾಮೀಣ ಜನತೆ ಇನ್ಮುಂದೆ ಜನನ ಮತ್ತು ಮರಣ ಪ್ರಮಾಣ ಪತ್ರಕ್ಕಾಗಿ ತಹಶೀಲ್ದಾರ್ ಕಛೇರಿಗೆ ಅಲೆಯಬೇಕಾಗಿಲ್ಲ. ಬದಲಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈ ಪ್ರಮಾಣ ಪತ್ರಗಳನ್ನು ವಿತರಿಸುವ ಅಧಿಕಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶಕ್ಕೆ ಇ-ಜನನ ತಂತ್ರಾಂಶ ಸಂಯೋಜನೆ ಮಾಡಲಿದ್ದು, ಇದರ ನಿರ್ವಹಣೆ ಕಲಿತುಕೊಳ್ಳಲು ಪಿಡಿಒಗಳಿಗೆ ಕೈಪಿಡಿಗಳನ್ನು ಕಳುಹಿಸಲಾಗಿದ್ದು, ಇನ್ಮುಂದೆ ಗ್ರಾಮಪಂಚಾಯಿತಿ ಮಟ್ಟದಲ್ಲೇ ಜನನ ಮತ್ತು ಮರಣ ಪ್ರಮಾಣ ಪತ್ರಗಳು ಸಿಗಲಿವೆ. ಇನ್ನು ಗ್ರಾಮಪಂಚಾಯಿತಿ ಪಿಡಿಒಗಳು ಕೇವಲ ಇ-ಜನ್ಮ ತಂತ್ರಾಂಶದಲ್ಲಿ ಸರ್ಚ್ ಮಾಡಿ ಜನನ ಮತ್ತು ಮರಣ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿ ವಿತರಿಸಬಹುದು.
ಆದರೆ ನೋಂದಣಿ ಮಾಡಿಕೊಳ್ಳುವ ಅಥವಾ ತಿದ್ದುಪಡಿ ಮಾಡುವ ಅಧಿಕಾರ ಹೊಂದಿಲ್ಲ. ಒಂದು ವೇಳೆ ಜನನ ಮತ್ತು ಪ್ರಮಾಣ ಪತ್ರದಲ್ಲಿ ತಿದ್ದುಪಡಿ ಮಾಡಬೇಕಿದ್ದರೆ ಆಯಾ ತಾಲೂಕುಗಳ ಅಟಲ್ ಜನಸ್ನೇಹಿ ಕೇಂದ್ರಗಳನ್ನು ಸಂಪರ್ಕಿಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.