ಕಾರವಾರ : ಜಿಲ್ಲೆಯಾದ್ಯಂತ ಮಂಗಳವಾರ ದಿನವಿಡೀ ಮಳೆಯಾಗಿದ್ದು, ಕೆಲವೆಡೆ ಧಾರಾಕಾರವಾಗಿ ಸುರಿದಿದೆ.
ಶಿರಸಿಯಲ್ಲಿ ಮಂಗಳವಾರ ಬೆಳಗಿನಿಂದ ಆಗಾಗ ಸುರಿಯುತ್ತಿದ್ದ ಜಿಟಿಜಿಟಿ ಮಳೆ ಮಧ್ಯಾಹ್ನದ ನಂತರ ಚುರುಕುಗೊಂಡಿದೆ.
ಎರಡು ದಿನಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ದಿನವಿಡೀ ಮೋಡ ಕವಿದ ವಾತಾವರಣ, ನಡುನಡುವೆ ಒಮ್ಮೆ ಮಳೆ ಸುರಿಯುತ್ತಿದೆ. ಮಂಗಳವಾರ ಸಹ ಇದೇ ವಾತಾವರಣ ಮುಂದುವರಿದಿದೆ. ಎಡೆಬಿಡದೇ ಮಳೆ ಸುರಿಯುತ್ತಿರುವುದು ಸಾರ್ವಜನಿಕ ಗಣಪತಿ ವೀಕ್ಷಣೆಗೆ ಬರುವವರಿಗೆ ಅಡ್ಡಿಯಾಗಿದೆ. ಆದರೆ ಅಪರೂಪಕ್ಕೊಮ್ಮೆ ಎಂಬಂತೆ ಜೋರು ಮಳೆ ಬೀಳುತ್ತಿರುವುದರಿಂದ ಜನ ಮಳೆಯ ಸಂಭ್ರಮದಲ್ಲಿದ್ದಾರೆ.
ಹೊನ್ನಾವರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಮಂಗಳವಾರವೂ ಮುಂದುವರಿದಿದ್ದು, ಅಲ್ಲಲ್ಲಿ ಗುಡ್ಡ ಕುಸಿತ ಹಾಗೂ ಕೆಲವು ಕಟ್ಟಡಗಳಿಗೆ ಅಲ್ಪ ಸ್ವಲ್ಪ ಹಾನಿ ಸಂಭವಿಸಿರುವ ವರದಿಯಾಗಿದೆ.
ನವಿಲಗೋಣದ ಚಿಪ್ಪಿಹಕ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಸಮೀಪದ ಗುಡ್ಡದಿಂದ ಬಂಡೆಯೊಂದು ಉರುಳಿ ಬಿದ್ದಿದ್ದು ಶಾಲೆಯ ಕೋಣೆಯೊಂದಕ್ಕೆ ಹಾನಿ ಸಂಭವಿಸಿದೆ. ಘಟನೆ ನಡೆದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೋಣೆಯಲ್ಲಿದ್ದರೆನ್ನಲಾಗಿದೆ. ‘ವಿದ್ಯಾರ್ಥಿ ಗಳಿಗೆ ಯಾವುದೇ ತೊಂದರೆಯಾಗಿಲ್ಲ. ಅವರನ್ನು ಬೇರೊಂದು ಕೋಣೆಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಶಾಲಾ ಕೊಠಡಿಗೆ ಮಾತ್ರ ಧಕ್ಕೆಯಾಗಿದೆ’ ಎಂದು ತಹಶೀಲ್ದಾರ್ ಕಚೇರಿಯ ಮೂಲಗಳು ತಿಳಿಸಿವೆ.
ಕುಮಟಾದಲ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಬೆಳೆಯುತ್ತಿರುವ ಭತ್ತದ ಬೆಳೆಗೆ ವರವಾಗಿ ಪರಿಣಮಿಸಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಶಂಕರ ಹೆಗಡೆ ತಿಳಿಸಿದ್ದಾರೆ.
‘ಕೃಷಿ ಕಾರ್ಯದ ಆರಂಭದಲ್ಲಿ ಉತ್ತಮ ರೀತಿಯಲ್ಲಿ ಬಿದ್ದಿದ್ದ ಮಳೆ ಕ್ರಮೇಣ ಕಡಿಮೆಯಾಗುತ್ತಾ ಹೋಗಿ ನಾಟಿ ಮಾಡಿದ್ದ ಭತ್ತದ ಬೆಳೆಯ ಬಗ್ಗೆ ರೈತರು ಆತಂಕ ಪಡುವಂತಾಗಿತ್ತು. ಆದರೆ ಕಳೆದ ವಾರದಲ್ಲಿ ಆರಂಭವಾದ ಮಳೆ ಭತ್ತದ ಬೆಳೆಗೆ ಅನುಕೂಲಕರವಾಗಿ ಪರಿಣಮಿಸಿದೆ’ ಎಂದು ಹೇಳಿದ್ದಾರೆ.
‘ತಾಲ್ಲೂಕಿನ ಒಟ್ಟೂ 4,500 ಹೆಕ್ಟೇರ್ ಭತ್ತದ ಕ್ಷೇತ್ರದ ಪೈಕಿ ಸುಮಾರು 4,350 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ 2,526.5 ಮಿಲಿ ಮೀಟರ್ ಮಳೆ ಬಿದ್ದಿತ್ತು. ಈ ವರ್ಷ ಇದಿವರೆಗೆ 2,611.2 ಮಿಲಿ ಮೀಟರ್ ಮಳೆ ಬಿದ್ದಿದೆ’ ಎಂದು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 342.7 ಮಿ.ಮೀ. ಮಳೆಯಾಗಿದ್ದು, ಸರಾಸರಿ 31.2 ಮಿ.ಮೀ. ಮಳೆ ಪ್ರಮಾಣ ದಾಖಲಾಗಿದೆ.
ಅಂಕೋಲಾ 39 ಮಿ.ಮೀ., ಭಟ್ಕಳ 48 ಮಿ.ಮೀ., ಹಳಿಯಾಳ 10.2., ಹೊನ್ನಾವರ 60.6 ಮಿ.ಮೀ., ಕಾರವಾರ 57.8 ಮಿ.ಮೀ., ಕುಮಟಾ 24.2 ಮಿ.ಮೀ., ಮುಂಡಗೋಡ 4 ಮಿ.ಮೀ., ಸಿದ್ದಾಪುರ 14.2 ಮಿ.ಮೀ., ಶಿರಸಿ 27.5 ಮಿ.ಮೀ., ಜೊಯಿಡಾ 38.6 ಮಿ.ಮೀ., ಯಲ್ಲಾಪುರ 18.6 ಮಿ.ಮೀ. ಮಳೆಯಾಗಿದೆ.