ಕುಮಟಾ : ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಬಾಧಿತರಿಗೆ ಮನೆ ಬಾಗಿಲಿಗೆ ತರೆಳಿ ಆರೋಗ್ಯ ಸೇವೆ ಒದಗಿಸುತ್ತಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳುಗಳಿಂದ ಬಾಕಿ ಇರುವ ವೇತನ ಹಾಗೂ ನಿರ್ವಹಣಾ ವೆಚ್ಚ ಬಾರದೆ ಸೇವೆಯಲ್ಲಿ ವ್ಯತೇಯವಾಗುವ ಸಾಧ್ಯತೆ ಇರುವುದರಿಂದ ಅನದಾನ ಬಿಡುಗಡೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿ ಸ್ಕೊಡ್‍ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ ನಾಯ್ಕ ಹಾಗೂ ಎಂಡೋಸಲ್ಫಾನ್ ಸಂಚಾರಿ ಆರೋಗ್ಯ ಘಟಕಗಳ ವೈದ್ಯಕೀಯ ಸಿಬ್ಬಂದಿಗಳು ಇಂದು ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿರವರನ್ನು ಹಾಗೂ ತಹಶಿಲ್ದಾರರು ಮತ್ತು ತಾಲೂಕ ದಂಡಾಧಿಕಾರಿಗಳು ಹಾಗೂ ತಾಲೂಕ ಆರೋಗ್ಯಾಧಿಕಾರಿರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಉತ್ತರ ಕನ್ನಡ ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗಾಗಿ 6 ತಾಲೂಕಗಳ ವ್ಯಾಪ್ತಿಯಲ್ಲಿ ಸಂಚಾರಿ ಆರೋಗ್ಯ ಘಟಕಗಳ ಮೂಲಕ ಆರೋಗ್ಯ ಸೇವೆ ನೀಡುತ್ತಿರುವ ಸ್ಕೊಡ್‍ವೆಸ್ ಸಂಸ್ಥೆಯ ಸಂಚಾರಿ ಆರೋಗ್ಯ ಘಟಕಗಳಿಗೆ ಕಳೆದ 7 ತಿಂಗಳುಗಳಿಂದ ಅನುದಾನ ಬಿಡುಗಡೆಯಾಗದೇ ಇರುವುದನ್ನು ಶಾಸಕರ ಮೂಲಕ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಈ ಮನವಿಯನ್ನು ನೀಡಲಾಗಿದೆ. ಜಿಲ್ಲೆಯ ಎಂಡೋಸಲ್ಪಾನ್ ಬಾಧಿತÀರಿಗೆ ಸೌಲಭ್ಯ ಒದಗಿಸುವಲ್ಲಿ ಕೆಲವು ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು, ಅನುದಾನ ಬಿಡುಗಡೆಗೆ ಅಡ್ಡಿ ಮಾಡುತ್ತಿರುವುದು ವೇತನ ಪಾವತಿಸಲು ಅನಾರೋಗ್ಯಕರ ಬೇಡಿಕೆ ಸಲ್ಲಿಸುತ್ತಿರುವ ವಿಷಯದ ಬಗ್ಗೆಯೂ ಮನವಿಯಲ್ಲಿ ದಾಖಲಿಸಿ ಅಗತ್ಯ ಕಾನೂನು ಕ್ರಮಕ್ಕೂ ಸ್ಕೊಡ್‍ವೆಸ್ ಸಂಸ್ಥೆಯು ನೀಡಿದ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ಕಳೆದ ಎರಡೂವರೆ ವರ್ಷಗಳಿಂದ ಸುಮಾರು 2000 ಎಂಡೋಪೀಡಿತರೂ ಸೇರಿದಂತೆ ಸುಮಾರು 65000 ಕ್ಕೂ ಹೆಚ್ಚು ರೋಗಿಗಳಿಗೆ ಈ ಸಂಚಾರಿ ಆರೋಗ್ಯ ಘಟಕಗಳಿಂದ ಸೇವೆ ಒದಗಿಸಲಾಗಿದ್ದು ವೈದ್ಯರು, ಫಿಜಿಯೋಥೆರಪಿಸ್ಟ್, ಸ್ಟಾಫ್‍ನರ್ಸ್‍ಗಳು, ಆರೋಗ್ಯ ಸಹಾಯಕರು ಸೇರಿದಂತೆ 6 ಜನರ ವೈದ್ಯಕೀಯ ತಂಡ ದಿನನಿತ್ಯ ಎಂಡೋಸಲ್ಪಾನ್ ಬಾಧಿತರ ಸೇವೆಯಲ್ಲಿ ತೊಡಗಿದ್ದರೂ ನಿಯಮಾನುಸಾರ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದೆ ಇರುವುದರಿಂದ ಸದರಿ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಕಳೆದುಕೊಂಡ ವೈದ್ಯಕೀಯ ತಂಡಗಳು ಎಂಡೋಸಲ್ಫಾನ್ ಬಾಧಿತರ ವೇತನ ಪಾವತಿಯಾಗುವವರೆಗೆ ಸೇವೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿ ಮನವಿ ನೀಡಿರುತ್ತಾರೆ.
ಕೋವಿಡ್ -19 ನಂತಹ ಸಂದರ್ಭದಲ್ಲಿ ಎಂಡೋಸಲ್ಪಾನ್ ಬಾಧಿತರಿಗೆ ಆರೋಗ್ಯ ಸೇವೆ ಇಂತಹ ಆರೋಗ್ಯ ಸೇವೆ ನಿಲ್ಲಬಾರದು, ಈ ಆರೋಗ್ಯ ಸೇವೆ ನಿರಂತರವಾಗಿ ನಡೆಯುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಮಾತನಾಡಲಾಗುವುದು, ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನ ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ಗಮನ ತೆಗೆದುಕೊಳ್ಳಲಾಗುವುದು. – ಶ್ರೀ ದಿನಕರ ಶೆಟ್ಟಿಶಾಸಕರು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ
ಎಂಡೋಸಲ್ಪಾನ್ ಪೀಡಿತರ ಮನೆ ಬಾಗಿಲಿಗೆ ತೆರಳಿ ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ದೇಶನದಂತೆ ಆರೋಗ್ಯ ಸೇವೆ ನೀಡುತ್ತಿರುವ ನಮಗೆ ಸಕಾಲದಲ್ಲಿ ವೇತನ ಹಾಗೂ ನಿರ್ವಹಣಾ ವೆಚ್ಚ ಪಾವತಿಯಾಗದಿದ್ದಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರು ಹಾಗೂ ಸಚಿವರಿಗೆ ಮನವಿ ನೀಡಲಾಗುತ್ತಿದ್ದು ಅವರ ಸಲಹೆ ಸೂಚನೆಯನ್ನಾಧರಿಸಿ ಸೇವೆಯನ್ನು ಮುಂದುವರಿಸುವ ಅಥವಾ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಗುವುದು. – ಡಾ. ವೆಂಕಟೇಶ ನಾಯ್ಕ ಕಾರ್ಯನಿರ್ವಾಹಕ ನಿದೇರ್ಶಕರು ಸ್ಕೋಡವೇಸ್ ಸಂಸ್ಥೆ, ಶಿರಸಿ