ಕಾರವಾರ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಅಕ್ಟೋಬರ್ 28ರಂದು ಜಿಲ್ಲೆಯ 26 ಮತಗಟ್ಟೆಗಳಲ್ಲಿ ಮತದಾನ ನಡೆಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ 1 ಸಾವಿರ ಮತದಾರರಿಗೆ ಒಂದರಂತೆ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದ್ದು, ಜಿಲ್ಲೆಯ 23 ಮೂಲ+3 ಹೆಚ್ಚುವರಿ ಮತಗಟ್ಟೆ ಸೇರಿಸಿ ಒಟ್ಟು 26 ಮತಗಟ್ಟೆಗಳಲ್ಲಿ ಭಾರತ ಚುನಾವಣಾ ಆಯೋಗವು ಕೋವಿಡ್-19ರ ಹಿನ್ನೆಲೆಯಲ್ಲಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ ಮತದಾನ ನಡೆಸಲಾಗುವುದೆಂದು ಅವರು ಹೇಳಿದರು.
ಕರ್ನಾಟಕ ಪಶ್ಚಿಮ ಪದವಿಧರ ಕ್ಷೇತ್ರದ ಚುನಾವಣೆ ಪ್ರಕ್ರಿಯೆಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.
ಅಕ್ಟೋಬರ 28ರಂದು ಮತದಾನ ನಡೆಸಿ, ನವೆಂಬರ್ 2ರಂದು ಮತ ಎಣಿಕೆ ನಡೆಸಲಾಗುವುದೆಂದರು. ಸೆಪ್ಟಂಬರ್ 29ರಿಂದಲೇ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಾದರಿ ನೀತಿಸಂಹಿತೆ ಜಾರಿಯಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಸಂದರ್ಭದಲ್ಲಿರುವಂತಹ ಮಾದರಿ ನೀತಿ ಸಂಹಿತೆ ಈಗಲೂ ಅನ್ವಯಿಸುತ್ತದೆ. ಚುನಾವಣೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಜರುಗಿಸಲು ಮಾದರಿ ನೀತಿಸಂಹಿತೆ ತಂಡಗಳನ್ನು ರಚಿಸಿ ಆದೇಶ ಹೊರಡಿಸಲಾಗುವುದು. ಈ ಆದೇಶದನ್ವಯ ನಿಯೋಜಿತ ಪ್ರತಿ ತಂಡಕ್ಕೆ ಓರ್ವ ವಿಡಿಯೋಗ್ರಾಪರ್ ನೇಮಿಸಿ, ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ವಿಡಿಯೋಗ್ರಾಪರ್‍ನ ಸಹಾಯದಿಂದ ಚಿತ್ರೀಕರಿಸಿ, ಆಯೋಗದ ಅಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ಮಾದರಿ ನೀತಿಸಂಹಿತೆ ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯಿಸುತ್ತಿದ್ದು, ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗುರುತಿಸಿಕೊಂಡಲ್ಲಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರದಲ್ಲಿ ತೊಡಗಿದ್ದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.