ಶಿರಸಿ : ವಂಚನೆಗೆ ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಿರುವ ಖಧೀಮರು ಭಾವನಾತ್ಮಕ ಸಂಬಂಧವನ್ನೂ ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಘಟನೆ ವರದಿಯಾಗಿದೆ. ಮಕ್ಕಳಾಗಲಿಲ್ಲ ಎಂಬ ನೋವು ಕಾಡುವ ಜನರನ್ನೂ ತಮ್ಮ ಆರ್ಥಿಕ ಮೂಲವಾಗಿ ಬಳಸಿಕೊಂಡ ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ಮಂಜುನಾಥ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಈತ ಮಕ್ಕಳಾಗದ ಕುಟುಂಬದವರನ್ನು ಸಂಪರ್ಕಿಸಿ ಅವರಿಗೆ ಮಕ್ಕಳಾಗುವ ಗಿಡುಮೂಲಿಕೆ ಔಷಧಿ ನೀಡುವುದಾಗಿ ನಂಬಿಸಿ ವಂಚಿಸುತ್ತಿದ್ದ ಎಂಬ ಆರೋಪದ ಮೇಲೆ ಪೊಲೀಸರು ಆತನ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಕ್ಕಳಾಗದ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಬಳಿಕ ಪರಿಚಯಸ್ಥರಂತೆ ವರ್ತಿಸಿ ಅವರಿಗೆ ಮಕ್ಕಳಾಗುವ ಗಿಡಮೂಲಿಕೆ ಔಷಧಿ ನೀಡುವುದಾಗಿ ಹೇಳಿ ಸಾವಿರಾರು ರೂಪಾಯಿಗಳನ್ನು ಪಡೆದು ವಂಚಿಸುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ತನ್ಮ ಹಿಡಿತಕ್ಕೆ ಪಡೆದು ತನಿಖೆ ಮುಂದುವರೆಸಿರುವ ಪೋಲಿಸರಿಗೆ, ರಾಜ್ಯಾದ್ಯಂತ ಹಲವು ಜನರಿಗೆ ಮಕ್ಕಳಾಗುವ ಔಷಧಿ ನೀಡುವುದಾಗಿ ನಂಬಿಸಿ ವಂಚಿಸಿರುವ ಬಗ್ಗೆ ಮಾಹಿತಿ ಲಭಿಸಿದೆ. ಬೃಹತ್ ಜಾಲವನ್ನು ಇರುವ ಬಗ್ಗೆ ತಿಳಿದು ಬಂದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿರಸಿ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ.ಟಿ.ನಾಯಕ್ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷಕ ಪ್ರದೀಪ್.ಬಿ.ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ನಂಜಾ ನಾಯ್ಕ. ಎನ್.ಶ್ಯಾಮ್ ಪಾವಸ್ಕರ. ಪ್ರೊ. ಪಿ.ಎಸ್.ಐ ನಾಗೇಂದ್ರ ನಾಯ್ಕ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.