ಕಾರವಾರ:ಅಕ್ಟೋಬರ್ 7, 8 ಬುಧವಾರ, ಗುರುವಾರ ಎರಡು ದಿನಗಳ ಕಾಲ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ಸಾಗರ ಕವಚ ಕಾರ್ಯಾಚರಣೆ ನಡೆಯಲಿದ್ದು
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದ ಮೀನುಗಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ.
ಬುಧವಾರ ಬೆಳಗ್ಗೆ 5 ಗಂಟೆಯಿಂದ ಮುಂದಿನ 36 ತಾಸುಗಳ ಕಾಲ ಈ ಕಾರ್ಯಾಚರಣೆ ಜಾರಿಯಲ್ಲಿರಲಿದೆ. ಈ ವೇಳೆಯಲ್ಲಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರಿಕೆಗೆ ತೆರಳುವ ಮತ್ತು ಮರಳುವ ಎಲ್ಲ ಬೋಟ್, ದೋಣಿಗಳನ್ನು ತಪಾಸಣೆ ಮಾಡಲಿದ್ದಾರೆ.
ಹಾಗಾಗಿ ಮೀನುಗಾರರಿಗೆ ಕರಾವಳಿ ಕಾವಲು ಪಡೆ ಮಹತ್ವದ ಸೂಚನೆಗಳನ್ನು ನೀಡಿದೆ. ಮೀನುಗಾರಿಕೆ ತೆರಳುವ ಬೋಟ್, ದೋಣಿಯ ಪ್ರತಿಯೊಬ್ಬ ಮೀನುಗಾರರು ಗುರುತಿನ ಕಾರ್ಡುಗಳನ್ನು ಹೊಂದಿರಬೇಕು. ಮೀನುಗಾರರ ಐಡಿ ಕಾರ್ಡ್, ಆಧಾರ ಕಾರ್ಡ್ ಯಾವುದಾದರು ಗುರುತಿನ ಕಾರ್ಡ್ ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಬೋಟ್, ದೋಣಿ ಮಾಲೀಕರು ಸಂಬಂಧಪಟ್ಟ ದಾಖಲೆಗಳನ್ನು ಇಟ್ಟುಕೊಂಡಿರಬೇಕು. ಸಮುದ್ರದಲ್ಲಿ ಯಾರಾದರು ಬೋಟ್, ದೋಣಿ ಹತ್ತಿ ದಡಕ್ಕೆ ಸೇರಿಸಲು ಹೇಳಿದರೆ ಯಾರನ್ನೂ ಹತ್ತಿಸಿಕೊಳ್ಳಬಾರದು. ಮೀನುಗಾರಿಕೆ ಇಲಾಖೆ, ಜಟ್ಟಿ, ಬಂದರು, ಲ್ಯಾಂಡಿಂಗ್ ಪಾಯಿಂಟ್ ಗಳಲ್ಲಿ ಮೀನುಗಾರಿಕೆ ತೆರಳುವ, ಮರಳುವ ಬೋಟ್, ದೋಣಿ ಮಾಹಿತಿಯನ್ನು ನಮೂದಿಸಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.