ಅಂಕೋಲಾ : ತಾಲೂಕಿನ ಶೇಟಗೇರಿಯ ಗ್ರಾಪಂ ಬಳಿ ಎಲ್.ಐ.ಸಿ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಮನೆಗಳ್ಳತನ ಪ್ರಕರಣದಲ್ಲಿ ನಗದು, ಬಂಗಾರದ ಆಭರಣಗಳು, ವಿದೇಶಿ ಟಾರ್ಚ ಸೇರಿದಂತೆ ಇತರೇ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ. ಒಟ್ಟು 8.40 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ಅಂದಾಜಿಸಲಾಗಿದೆ.
ಚಾಲಾಕಿ ಕಳ್ಳರು ಮನೆಗೆ ಅಳವಡಿಸಿದ ಸಿ.ಸಿ ಕ್ಯಾಮರಾಕ್ಕೆ ಸಂಬಂಧಿಸಿದ ಡಿವಿಆರ್ ಸೆಟ್ ಹಾರ್ಡ್ ಡಿಸ್ಕ ಮತ್ತಿತರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ ಎನ್ನಲಾಗಿದೆ.ಮನೆಯ ಮಾಲೀಕ ಅಂಕೋಲಾದಲ್ಲಿ ನೆಲೆಸಿರದೇ ಕಾರವಾರದ ಭಾಗ್ಯೋದಯ ಅಪಾರ್ಟಮೆಂಟನಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಆತನ ದೌರ್ಭಾಗ್ಯವೋ ಎನ್ನುವಂತೆ ಆತ ಅಂಕೋಲಾದ ತನ್ನ ಮನೆಗೆ ಬಂದ ವೇಳೆ ಈ ಘಟನೆ ಅರಿವಿಗೆ ಬಂದಿದ್ದು, ಮನೆ ಕಳ್ಳತನವಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಹಿಂದೆ ಕೆಲ ದೇವಸ್ಥಾನಗಳ ಹುಂಡಿ ಕಳವು ಮತ್ತಿತರ ಚಿಕ್ಕಪುಟ್ಟ ಕಳ್ಳತನದ ಪ್ರಕರಣಗಳು ಕೇಳಿ ಬಂದಿದ್ದವು. ಕಳೆದ 4-5 ದಿನಗಳಲ್ಲಿ ಶೇಟಗೇರಿ, ಬೆಳೆಸೆ, ಹುಲಿದೇವರವಾಡಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ. ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್‍ರಿಗೆ ಕಳ್ಳರನ್ನು ಪತ್ತೆಹಚ್ಚುವ ಕಾರ್ಯ ಸವಾಲಾಗಿದೆ.
ಇದೊಂದೇ ಅಲ್ಲದೆ ತಾಲೂಕಿನ ಹುಲಿದೇವರವಾಡ ಪೆಟ್ರೋಲ್ ಪಂಪ ಎದುರಿನ ಕೇಬಲ್ ನೆಟ್‍ವರ್ಕ್ ಆಫೀಸ ಮತ್ತು ಮನೆಯಿಂದ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತು ಕಳ್ಳತನವಾದ ಕುರಿತು ಪ್ರಕರಣ ದಾಖಲಾಗಿದೆ.ಬೆಳೆಸೆಯ ಆಗೇರ ಕಾಲೋನಿಯ ಮನೆಯೊಂದರಲ್ಲಿಯೂ ಕಳ್ಳತನದ ಪ್ರಕರಣ ದಾಖಲಾಗಿದ್ದು, ಬೆಳ್ಳಿಯ ಆಭರಣ ಸೇರಿದಂತೆ ಬೆಲೆಬಾಳುವ ವಸ್ತುಗಳು ಕಳ್ಳತನವಾದ ಬಗ್ಗೆ ವರದಿಯಾಗಿದೆ.
ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು ಕಳ್ಳರಿಗೆ ಬಲೆ ಬೀಸಿದ್ದಾರೆ. ಪೊಲೀಸ್ ಇಲಾಖೆ ಸಮರ್ಥವಾಗಿ ಈ ಪ್ರಕರಣ ಬೇಧಿಸುತ್ತದೆ ಬ ಬಗ್ಗೆ ಸ್ಥಳೀಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.