ಗೋಕರ್ಣ : ಪವಿತ್ರ ಪುರುಷೋತ್ತಮ ಮಾಸದ ನಿಮಿತ್ತ ಖ್ಯಾತ ರಂಗಕರ್ಮಿ, ಚಿಂತಕ, ಬಹುಮುಖ ವ್ಯಕ್ತಿತ್ವದ ನಟ, ನಿರ್ದೇಶಕ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಕಾಸರಗೋಡು ಚಿನ್ನಾ ಅವರು ಗೋಕರ್ಣದ ಅಶೋಕೆಯಲ್ಲಿ ಪರಮಪೂಜ್ಯ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಗೋಕರ್ಣದ ಅಶೋಕೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸಂಬಂಧಿ ಗುರುಕುಲಗಳನ್ನು ವೀಕ್ಷಣೆ ಮಾಡಿದ ಅವರು ಪರಮಪೂಜ್ಯ ಶ್ರೀಗಳ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಶೋಕೆಯಲ್ಲಿ ನಿರ್ಮಾಣವಾಗುತ್ತಿರುವ ಕುಟೀರಗಳು ಹಾಗೂ ಕುಡ್ಲೆಯಲ್ಲಿ ನಿರ್ಮಾಣವಾಗಿರುವ ಪ್ರಾಣಾಂಕುರ ಪ್ರಾಂಗಣಗಳನ್ನು ವೀಕ್ಷಿಸಿ ಭಾರತೀಯ ಸಂಪ್ರದಾಯ ಹಾಗೂ ಸಂಸ್ಕೃತಿಯ ಉಳಿವಿಗೆ ಶ್ರೀಗಳು ಮಾಡುತ್ತಿರುವ ಮಹತ್ತರ ಪ್ರಯತ್ನಕ್ಕೆ ತಾನು ಜೊತೆಗಿದ್ದು ಕೈಜೋಡಿಸುವುದಾಗಿ ತಿಳಿಸಿದರು.
ಕಲೆ ಸಂಸ್ಕೃತಿಯ ಉಳಿವಿಗಾಗಿ ನಡೆಯುತ್ತಿರುವ ಈ ಪ್ರಯತ್ನದಲ್ಲಿ ವಿದ್ಯಾರ್ಥಿಗಳಿಗೆ ಮಾತುಗಾರಿಕೆ ದ್ವನಿಗಳ ಏರಿಳಿತ ಹಾಗೂ ವೈವಿಧ್ಯಮಯ ಕಲೆಗಳು ಸಂಬಂಧಿ ತರಬೇತಿ ನೀಡಿ ಅವುಗಳನ್ನು ವಿದ್ಯಾರ್ಥಿಗಳು ಕರಗತಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕಲ್ಪನೆ ಹಾಗೂ ತದಂಗವಾಗಿ ನಡೆಯುತ್ತಿರುವ ಗುರುಕುಲಗಳ ಬಗ್ಗೆ ಹಾಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಶ್ರೀಗಳು ಕಾಸರಗೋಡು ಚಿನ್ನಾಅವರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದರು.
ಕೇವಲ ಅಂಕಗಳಿಕೆಯೇ ಸಾಧನೆ ಎಂಬ ಭ್ರಮೆಯಲ್ಲಿ ಇರುವ ಸಮಾಜಕ್ಕೆ ವಿದ್ಯಾರ್ಥಿಗಳಿಗೆ ಜೀವನ ಶಿಕ್ಷಣ ನೀಡುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇ ಬೇಕಾದ ಅವಶ್ಯಕತೆಯು ಎದುರಾದ ಸಂದರ್ಭದಲ್ಲಿ ನೂತನ ಶಿಕ್ಷಣ ನೀತಿಗೆ ಅನುಗುಣವಾಗಿ ಭವಿಷ್ಯದ ಕುಡಿಗಳಾದ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಕುರಿತಾಗಿ ವಿಚಾರವಿನಿಮಯ ನಡೆಯಿತು.ಶ್ರೀಮಠದ ವತಿಯಿಂದ ವ್ಯವಸ್ಥಾ ಪರಿಷತ್ ನ ಗೌರವಾಧ್ಯಕ್ಷ ಡಿ ಡಿ ಶರ್ಮಾ,ಕಾರ್ಯಾಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಆಡಳಿತಾಧಿಕಾರಿ ಸುರೇಂದ್ರ ಹೆಗಡೆ ಮಹೇಶ ಚಟ್ನಳ್ಳಿ,ಗಣೇಶ ಜೋಶಿ ಸಂಕೊಳ್ಳಿ,ಶಿಶಿರ ಹೆಗಡೆ ಹಾಗೂ ಚಿನ್ನಾ ಅವರೊಡನೆ ಆಗಮಿಸಿದ
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಿದಾನಂದ ಭಂಡಾರಿ ಕಾಗಾಲ ಕಾಸರಗೋಡು ಚಿನ್ನಾ ಅವರ ಅವರ ಧರ್ಮಪತ್ನಿ ಶ್ರೀಮತಿ ಅನಿತಾ ನಾಯಕ್ ಹಾಗೂ ರಂಗ ಕಲಾವಿದ ಶಶಿಭೂಷಣ ಕಿಣಿ ಉಡುಪಿ ಸುಬ್ರಹ್ಮಣ್ಯ ಪ್ರಭು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಬಳಿಕ ಕಾಸರಗೋಡು ಚಿನ್ನಾ ಹಾಗೂ ಇತರರು ಮಲ್ಲಿಕಾರ್ಜುನ ದೇವಾಲಯ ಹಾಗೂ ಗೋಕರ್ಣದ ಆತ್ಮಲಿಂಗದ ದರ್ಶನ ಪಡೆದರು.ಗೋಕರ್ಣ ದೇವಸ್ಥಾನದಲ್ಲಿ ಶ್ರೀಯುತ ಜಿ ಕೆ ಹೆಗಡೆಯವರು ಚಿನ್ನಾ ದಂಪತಿಗಳಿಗೆ ಶಾಲು ಹೊದಿಸಿ ಗೌರವಿಸಿದರು