ಕುಮಟಾ: ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರವೀಂದ್ರ ಭಟ್ಟ ಸೂರಿಯವರನ್ನು ಇತ್ತೀಚೆಗೆ ಅವರ ಮನೆಯಲ್ಲಿ ಭೇಟಿಯಾದ ಜಿಲ್ಲಾಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸಮಿತಿಯ ಮಾಜಿ ಅಧ್ಯಕ್ಷರೂ ಹಾಲಿ ಸದಸ್ಯರೂ ಆದ ರತ್ನಾಕರ ನಾಯ್ಕರವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೂರಿಯವರ ಸಾಮರ್ಥ್ಯವನ್ನು ನಾನು 15 ವರ್ಷಗಳ ಹಿಂದೇ ಗುರುತಿಸಿದ್ದೆ. ಅವರು ಅತ್ಯುತ್ತಮ ಶಿಕ್ಷಕರು. ಹೊಲನಗದ್ದೆ ಶಾಲೆಯಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ರಾಜ್ಯದ ಗಮನವನ್ನು ಸೆಳೆದಿವೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ,ಸಾಂಸ್ಕೃತಿಕ ವಾಗಿ, ಮತ್ತು ಧಾರ್ಮಿಕವಾಗಿ ಅವರ ಕಾರ್ಯ ಚಟುವಟಿಕೆಗಳು ಗಮನಾರ್ಹ. ಅವರಿಗೆ ಜಿಲ್ಲಾ ಪ್ರಶಸ್ತಿ ಘೋಷಣೆಯಾದಾಗ ಅನ್ನಿಸಿತ್ತು ಇವರು ರಾಜ್ಯ ಪ್ರಶಸ್ತಿಗೆ ಅರ್ಹರೆಂದು. ಅದೂ ಕೂಡಾ ಅವರಿಗೆ ದೊರಕಿದೆ. ಮುಂದೆ ರಾಷ್ಟ್ರ ಪ್ರಶಸ್ತಿಯೂ ದೊರಕಲಿ ಎಂದು ಹಾರೈಸುತ್ತೇನೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ರವೀಂದ್ರ ಭಟ್ಟ ಸೂರಿಯವರು ನಿಮ್ಮ ಅಭಿಮಾನ ಪ್ರೀತಿಯಿಂದ ಮನಸ್ಸು ತುಂಬಿ ಬಂದಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ಧಾರಿ ಹೆಚ್ಚಿದೆ. ನಿಮ್ಮೆಲ್ಲರ ನಿರೀಕ್ಷೆ ಹುಸಿ ಮಾಡದೇ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತೇನೆ ಎಂದರು.