ಕಾರವಾರ : ವಿಟಿಯು (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯ) ಆಡಳಿತ ವೈಫಲ್ಯದಿಂದಾಗಿ ಪದೇ ಪದೇ ಸುದ್ದಿಯಾಗುತ್ತಿದ್ದು, ಇಲ್ಲಿನ ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟಾನುಭವಿಸುವಂತಾಗಿದೆ ಎಂದು ಆರೋಪಿಸಿ ಎಬಿವಿಪಿ ತಾಲ್ಲೂಕು ಘಟಕದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿಟಿಯುನಿಂದ ಪ್ರತಿವರ್ಷ ನಾಲ್ಕು ಲಕ್ಷಕ್ಕೂ ಅಧಿಕ ವಿದ್ಯಾ ರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯುತ್ತಿ ದ್ದಾರೆ. ಆದರೆ, ವಿವಿಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿ, ಅವರಿಂದ ಮರು ಮೌಲ್ಯಮಾಪನ ಶುಲ್ಕ, ಪರೀಕ್ಷಾ ಶುಲ್ಕ ಹೆಸರಿನಲ್ಲಿ ಕೋಟ್ಯಂತರ ರು.ಗಳ ಹಗಲು ದರೋಡೆಗೆ ಇಳಿದಿದೆ ಎನ್ನುವುದು ವಿವಿಯ ನಡವಳಿಕೆಯಿಂದ ಸಾಬೀತಾಗುತ್ತಿದೆ ಎಂದು ದೂರಿದರು.

RELATED ARTICLES  ಬಿತ್ತನೆ ಕಾರ್ಯ ಆರಂಭ

ಜನವರಿಯಲ್ಲಿ ಕ್ರ್ಯಾಶ್ ಕೋರ್ಸ್ ಆರಂಭಿಸಿ ಫೆಬ್ರುವರಿಯಲ್ಲಿ ಪರೀಕ್ಷೆಗಳನ್ನು ನಡೆಸಲು ಹೈಕೋರ್ಟ್ ಆದೇಶಿಸಿತ್ತು. ಆದರೆ ಅದನ್ನು ಪಾಲಿಸದೇ ಗೊಂದಲದಲ್ಲಿ ಮೇನಲ್ಲಿ ಪರೀಕ್ಷೆ ನಡೆಸಿದೆ. ಇದರ ಫಲಿತಾಂಶ ಕೂಡ ಇನ್ನೂ ಬಂದಿಲ್ಲ. ಮೇನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಜೂನ್ ನಲ್ಲಿ ರೆಗ್ಯುಲರ್ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಾಗಿತ್ತು. ಆದರೆ ೫೦ ದಿನಗಳ ಅಂತರದಲ್ಲಿ ವಿದ್ಯಾರ್ಥಿಗಳು ೧೬ಕ್ಕಿಂತ ಹೆಚ್ಚು ವಿಷಯಗಳ ಪರೀಕ್ಷೆ ಬರೆದಿದ್ದಾರೆ ಎಂದು ತಿಳಿಸಿದರು.
ಎರಡು ವರ್ಷಗಳಿಂದ ವಿವಿಯು ಸರಿಯಾದ ಸಮಯಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಿಲ್ಲ. ಪರೀಕ್ಷೆ ನಾಳೆ ಇದೆ ಎನ್ನುವಾಗ ಐದಾರು ತಿಂಗಳ ಹಿಂದೆ ಬರೆದ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷೆ ಹಿಂದಿನ ದಿನ ಪ್ರಕಟಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೀಡಾಗುತ್ತಿದ್ದಾರೆ ಎಂದರು.

RELATED ARTICLES  ರೋಗಿಗಳ ಪಾಲಿನ ಆಪದ್ಬಾಂದವ : ಕರ್ಕಿಯ ಅವಧಾನಿ ಡಾಕ್ಟರ್ ಇನ್ನಿಲ್ಲ : ಕಣ್ಣು ಮುಚ್ಚಿದ ಖ್ಯಾತ ನೇತ್ರತಜ್ಞ

ಬೇಡಿಕೆಗಳು: ಕ್ರ್ಯಾಶ್ ಕೋರ್ಸ್ ಪದ್ಧತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು. ೨೦೧೦ ಹಾಗೂ ೨೦೧೫ರ ಬ್ಯಾಚ್ ನ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಆಗಿರುವ ತೊಂದರೆಗಳನ್ನು ನಿವಾರಿಸಬೇಕು. ಪರೀಕ್ಷೆ ಮುಗಿದ ತಿಂಗಳೊಳಗಾಗಿ ಫಲಿತಾಂಶ ನೀಡಬೇಕು. ನುರಿತ ಅಧ್ಯಾಪಕರಿಂದ ಮೌಲ್ಯಮಾಪನ ನಡೆಸಬೇಕು. ಮರುಮೌಲ್ಯಮಾಪನದಲ್ಲಿರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಶಿವಾನಂದ ಕರಾಳೆ ಮನವಿ ಸ್ವೀಕರಿಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಕಳುಹಿಸುವುದಾಗಿ ಭರವಸೆ ನೀಡಿದರು.

ಎಬಿವಿಪಿ ನಗರ ಕಾರ್ಯದರ್ಶಿ ಭಾನುಕುಮಾರ ಕುಡ್ತಳಕರ, ಜಿಲ್ಲಾ ಸಂಚಾಲಕ ಸಿದ್ದು ಮದರಕಂಡೆ, ಅಮೃತಾ, ತಿರುಮಲ, ಸಿದ್ದರಾಮೇಶ ಇದ್ದರು.