ಕುಮಟಾ : ಉತ್ತರಕನ್ನಡ ಕಂಡ ಶ್ರೇಷ್ಠ ಚಿಂತಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ , ಸಹಕಾರಿ ಕ್ಷೇತ್ರದ ಅಗ್ರಗಣ್ಯ ವ್ಯಕ್ತಿ, ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಾದರಿಯಾಗಿ ಬದುಕಿ, ಇಹಲೋಕ ತ್ಯಜಿಸಿರುವ ಡಾ. ವಿ.ಎಸ್ ಸೋಂದೆಯವರಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ಶ್ರದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಅವರು ನುಡಿನಮನ ಸಲ್ಲಿಸುತ್ತಾ ಮೊಡರ್ನ್ ಎಜ್ಯುಕೇಶನ್ ಸೊಸೈಟಿಯ ಸಂಸ್ಥಾಪಕ ಸದಸ್ಯರಾಗಿ, ಮೂರು ವರ್ಷಗಳ ಕಾಲ ಜಂಟಿ ಕಾರ್ಯದರ್ಶಿಗಳಾಗಿ, ಹತ್ತು ವರ್ಷಗಳ ಕಾಲ ಕಾರ್ಯದರ್ಶಿಯಾಗಿ, ಸುದೀರ್ಘ 33 ವರ್ಷಗಳ ಕಾಲ ಅಧ್ಯಕ್ಷರಾಗಿ, ನಂತರ ಆಡಳಿತ ಮಂಡಳಿಯ ಸದಸ್ಯರಾಗಿ 59 ವರ್ಷಗಳಷ್ಟು ದೀರ್ಘಕಾಲ ಎಂ.ಇ.ಎಸ್. ಸಂಸ್ಥೆಯ ಪ್ರಗತಿಗೆ ಹಾಗೂ ಶೈಕ್ಷಣಿಕ ಉನ್ನತೀಕರಣಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಡಾ. ವೆಂಕಟರಾವ್ ಎಸ್ ಸೋಂದೆಯವರು ಉತ್ತರ ಕನ್ನಡ ಕಂಡ ಬಹು ಪ್ರತಿಭಾವಂತ ವ್ಯಕ್ತಿ ಎಂದರು. ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ಸೋಂದೆಯವರ ಬಾಂಧವ್ಯ ಅವಿನಾಭಾವವಾದುದ್ದು, ಕಳೆದ ತಿಂಗಳು ಸೋಂದೆಯವರೇ ಫೋನ್ ಮಾಡಿ ತಮ್ಮ ಚಿಕ್ಕಮ್ಮನ ಹೆಸರಿನಲ್ಲಿ ವಿದ್ಯಾರ್ಥಿವೇತನಕ್ಕಾಗಿ ಸಹಾಯ ಮಾಡಿದ್ದನ್ನು ಸ್ಮರಿಸಿದ ಅವರು ನಮ್ಮ ಸಂಸ್ಥೆಗೆ ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ಮಾಡುತ್ತಿದ್ದ ಸೋಂದೆಯವರನ್ನು ಕಳೆದುಕೊಂಡ ಉತ್ತರ ಕನ್ನಡ ಅಕ್ಷರಶಃ ಬಡವಾಗಿದೆ ಎಂದರು.
ಶಿಕ್ಷಕ ಚಿದಾನಂದ ಭಂಡಾರಿ ಎಲ್ಲಾ ಶಿಕ್ಷಕರ ಪರವಾಗಿ ನುಡಿನಮನ ಸಲ್ಲಿಸಿ, ಸೋಂದೆಯವರದು ಮೇರು ವ್ಯಕ್ತಿತ್ವ. ಕೃಷಿ, ವಾಣಿಜ್ಯ, ಶಿಕ್ಞಣ, ಆರೋಗ್ಯ, ಸಹಕಾರ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅವರ ಕೊಡುಗೆ ಅಪಾರವಾಗಿತ್ತು. ಜಿಲ್ಲೆಯ ಕೃಷಿಕರಿಗೆ ವೈಜ್ಞಾನಿಕ ಕೃಷಿಯ ಕುರಿತು ಮಾರ್ಗದರ್ಶನ ಮಾಡಿದ್ದಲ್ಲದೆ, ಸ್ವತಃ ತಾವೇ ವೈಜ್ಞಾನಿಕ ಕೃಷಿಯನ್ನು ಮಾಡಿ ತೋರಿಸಿದರು. ಉತ್ತರ ಕನ್ನಡದ ಅನೇಕ ಶೈಕ್ಷಣಿಕ ಸಂಸ್ಥೆಗಳ ಬೆಳವಣಿಗೆಗೆ ಅವರ ಶ್ರಮ ಅಪಾರ ಎಂದರು.
ಡಾ. ಸೋಂದೆಯವರ ಬದುಕಿನ ಪುಟ ತೆರೆದಾಗ ಮೇರು ವ್ಯಕ್ತಿತ್ವದ ದರ್ಶನವಾಗುತ್ತದೆ. ಸಾಂಸ್ಕೃತಿಕವಾಗಿ, ಸಾಂಪ್ರದಾಯಿಕವಾಗಿ ಇಡೀ ಸಮಾಜಕ್ಕೆ ಆದರ್ಶಮಯವಾಗಿ ಬದುಕಿದವರು ಎನ್ನುತ್ತಾ ಕೊಂಕಣಿ ಸಾಹಿತ್ಯ ಅಕಾಡಮಿಯಲ್ಲಿ ಅವರ ಕಾರ್ಯ ಹಾಗೂ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.
ಇವರು ಅಪಾರ ಬಂಧುಬಳಗವನ್ನು ಅಗಲಿದ್ದು ಮೃತ ಆತ್ಮಕ್ಕೆ ಶಾಂತಿ, ಸದ್ಗತಿ ಸಿಗಲೆಂದು ಹಾಗೂ ಮೃತರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸಿ ಮೌನಾಚರಣೆಯನ್ನು ನಡೆಸಿ ಸಂತಾಪ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ್ ಆರ್ ನಾಯಕ, ಜಂಟಿ ಕಾರ್ಯದರ್ಶಿ ಶೇಷಗಿರಿ ಶಾನಭಾಗ, ವಿಶ್ವಸ್ಥರಾದ ಗಜಾನನ ಕಿಣಿ ಪ್ರಾಧ್ಯಾಪಕ ವೃಂದ, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.