ಕುಮಟಾ: ಡಿಸಿ ಹರೀಶಕುಮಾರ ನಿರ್ದೇಶನದ ಮೇರೆಗೆ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಎಂಜಿನಿಯರ್‍ಗಳ ಸಭೆ ನಡೆಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಶಿರಸಿ- ಕುಮಟಾ ರಸ್ತೆಯನ್ನು ಸಂಪೂರ್ಣ ಬಂದ್ ಮಾಡದಿರುವಾಗಿ, ಕಾಮಗಾರಿ ಪ್ರಕ್ರಿಯೆ ಸಮಯದಲ್ಲಿ ಲಘು ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದಾಗಿ ಕುಮಟಾ ಉಪವಿಭಾಗಾಧಿಕಾರಿ ಅಜಿತ್ ರೈ ಹೇಳಿದರು.
ಇನ್ನೊಂದು ವಾರದಲ್ಲಿ ಕಾಮಗಾರಿ ಪ್ರಾರಂಭ.
ಈ ವಿಷಯದ ಕುರಿತು ಮಾಹಿತಿನೀಡಿದ ಅವರು ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು, ಆ ಸಂದರ್ಭದಲ್ಲಿ ಲಘು ವಾಹನಗಳು ಸಂಚರಿಸಲು ಪಕ್ಕದಲ್ಲೇ ವ್ಯವಸ್ಥೆ ಮಾಡಿಕೊಡುವುದಾಗಿ ಗುತ್ತಿಗೆದಾರರು ಹಾಗೂ ಎನ್‍ಎಚ್‍ಎ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸದ್ಯ ರಸ್ತೆಯನ್ನು ಸಂಪೂರ್ಣ ಮುಚ್ಚುವುದಿಲ್ಲ. ಭಾರೀ ಪ್ರಮಾಣದ ಸರಕುಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಪರ್ಯಾಯ ಮಾರ್ಗಗಳಲ್ಲೇ ಸಂಚರಿಸಲು ಸೂಚಿಸಲಾಗುತ್ತದೆ ಎಂದು ತಿಳಿಸಿದರು.
ಸಮತಟ್ಟಾದ ಜಾಗದಲ್ಲಿ ಕಾಮಗಾರಿ ನಡೆಸುವ ವೇಳೆ ಲಘು ವಾಹನಗಳು ಓಡಾಡಬಹುದು. ಆದರೆ, ಘಟ್ಟ ಪ್ರದೇಶ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ಕಾಮಗಾರಿ ಮಾಡುವ ವೇಳೆ ವಾಹನಗಳು ಸಂಚರಿಸಲು ಜಾಗದ ಕೊರತೆ ಉಂಟಾಗುವುದಿದ್ದರೆ ಮೊದಲೇ ಗುತ್ತಿಗೆದಾರರು ಹಾಗೂ ಎನ್‍ಎಚ್‍ಎನವರು ನಮಗೆ ಪತ್ರ ಬರೆಯಲಿದ್ದಾರೆ. ಆ ಪ್ರಕಾರ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ, ಲಘು ವಾಹನಗಳು ಓಡಾಡಲೂ ಸಾಧ್ಯವೇ ಇಲ್ಲವೆಂದ ಪಕ್ಷದಲ್ಲಿ ಮಾತ್ರ ಕಾಮಗಾರಿ ನಡೆಯುವಷ್ಟು ಭಾಗದ ರಸ್ತೆ ಬಂದ್ ಮಾಡಿ ಪ್ರಕಟಣೆ ನೀಡುತ್ತೇವೆ. ಅಲ್ಲಿಗೆ ಸಮೀಪದ ಒಳ ರಸ್ತೆಗಳಿಂದ ಪರ್ಯಾಯ ಮಾರ್ಗ ಕಲ್ಪಿಸಲು ಯೋಜಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.