ಕುಮಟಾ : ತಾಲೂಕಿನ ರೋಟರಿ ಕ್ಲಬ್ ಸಹಯೋಗದಲ್ಲಿ “ವಿದ್ಯಾಪೀಠ ಒಂದು ಸಂವಾದ” ಎಂಬ ಶೀರ್ಷಿಕೆಯಲ್ಲಿ ಋಷಿಯುಗ ನವಯುಗ ಶಿಕ್ಷಣದ ಸಮ್ಮಿಲನದ ರೂಪದಲ್ಲಿ ಗೋಕರ್ಣದ ಅಶೋಕೆಯಲ್ಲಿ ಪ್ರಾರಂಭವಾಗುತ್ತಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತಾದ ಮಾಹಿತಿ ವಿನಿಮಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಆನ್ ಲೈನ್ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ದಿವ್ಯ ಉಪಸ್ಥಿತಿ ನೀಡಿದ ರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಭಾರತ ದೇಶ ಎಲ್ಲರದ್ದು ಅದೇ ರೀತಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ನಮ್ಮದಷ್ಟೇ ಅಲ್ಲ ಅದು ನಿಮ್ಮೆಲ್ಲರದ್ದು. ವಿಶ್ವ ವಿದ್ಯಾಪೀಠ ದೇಶವನ್ನು ಉಳಿಸಬೇಕು ಬೆಳೆಸಬೇಕು ಎಂದು ನಿರ್ಮಾಣವಾಗಿದ್ದು ಎಂದು ಅಭಿಪ್ರಾಯಪಟ್ಟರು.
ಶ್ರೀಶಂಕರರು ದೇಶ ಪರಿವರ್ತನೆ ಮಾಡಲು ಸಾಧ್ಯವಾದದ್ದು ಜ್ಞಾನದ ಬಲದಿಂದ. ಅತ್ಯುತ್ತಮ ಆರ್ಷ ವಿದ್ಯಾಕೇಂದ್ರದ ಮೂಲಕ ಹೊಸ ಪೀಳಿಗೆಗೆ ಇಂಥ ಜ್ಞಾನ ಬೋಧಿಸಿ ಧರ್ಮನಿಷ್ಠೆ, ದೇಶ ನಿಷ್ಠೆ, ಸಂಸ್ಕೃತಿ ನಿಷ್ಠೆಯನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉದ್ದೇಶ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮೀಜಿ ನುಡಿದರು.
ಪರಿಪೂರ್ಣವಾದ ಭಾರತೀಯ ವಿದ್ಯೆಗಳ ಕಲಿಕಾ ಕೇಂದ್ರ ಇಲ್ಲ. ಅಂಥ ವಿಶಿಷ್ಟ ಕಾರ್ಯಕ್ಕೆ ಶ್ರೀಮಠ ಮುಂದಾಗಿದೆ. ಶಂಕರರು ಹಿಂದೆ ಅವತಾರವೆತ್ತಿದ್ದ ಕಾರಣ ಇಂದು ಸಮಾಜ ಉಳಿದುಕೊಂಡಿದೆ. ಅವರ ಅವಿಚ್ಛಿನ್ನ ಪರಂಪರೆ ಮುಂದುವರಿಸಿಕೊಂಡು ಬಂದಿರುವ ಶ್ರೀರಾಮಚಂದ್ರಾಪುರ ಮಠ ಇಂಥ ಕಾರ್ಯವನ್ನು ಕೈಗೆತ್ತಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ನಾಲ್ಕೂ ವೇದಗಳ, ಶಾಸ್ತ್ರಗಳ ಕಲಿಕೆಗೆ ಅವಕಾಶ ನೀಡುವ ಒಂದು ಕಾರ್ಯ ಆಗಬೇಕು. ಉಪವೇದಗಳು, ವೇದಾಂಗಗಳು, ಅರುವತ್ತನಾಲ್ಕು ಕಲೆಗಳು, ಅನೇಕ ಭಾರತೀಯ ಮೂಲದ ವಿದ್ಯೆಗಳು, ಆಧುನಿಕ ಭಾಷೆ, ತಂತ್ರಜ್ಞಾನ, ಆತ್ಮ ರಕ್ಷಣೆಗೆ ಸಮರವಿದ್ಯೆಗಳನ್ನು ಒಳಗೊಂಡ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವುದು ಈ ವಿದ್ಯಾಪೀಠದ ಉದ್ದೇಶ. ಎಲ್ಲ ಭಾರತೀಯ ವಿದ್ಯೆಗಳ ಪರಿಚಯದ ಜತೆಗೆ ಒಂದು ವಿಷಯದಲ್ಲಿ ಆಳವಾದ ಜ್ಞಾನವನ್ನು ಒದಗಿಸುವುದು ಇಲ್ಲಿನ ವಿಶೇಷ ಎಂದರು.
ಸಂವಾದ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಶಶಿಕಾಂತ್ ಕೋಲೇಕರ್ ಎಲ್ಲರನ್ನೂ ಸ್ವಾಗತಿಸಿದರು, ಕಾರ್ಯದರ್ಶಿಗಳಾದ ಅತುಲ ಕಾಮತ್ ವಂದನಾರ್ಪಣೆ ಗೈದರು, ಹಿರಿಯ ಸದಸ್ಯರಾದ ಜಿ.ಎಸ್ ಹೆಗಡೆ ಪ್ರಾಸ್ಥಾವಿಕವಾಗಿ ಮಾತನಾಡಿದರು. ಖಜಾಂಚಿಗಳಾದ ಕಿರಣ ನಾಯಕ ತಾಂತ್ರಿಕ ಸಹಕಾರ ನೀಡಿದರೆ, ವಿನಾಯಕ ಹೆಗಡೆ, ಜೈವಿಠಲ ಕುಬಾಲ್ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿಕೊಟ್ಟರು.