ಕುಮಟಾ : ಕೊರೋನಾ ಮಹಾಮಾರಿಯಂತಹ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವ ಜೀವನವೇ ಅಸ್ತವ್ಯಸ್ತ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಗೋಶಾಲೆಗಳನ್ನು ನಡೆಸುವುದು ತೀರಾ ಕಷ್ಟದ ಸಂಗತಿಯಾಗಿದೆ. ನಿತ್ಯ ಗೋವಿಗೆ ಮೇವು ಹಾಗೂ ಇನ್ನಿತರ ವ್ಯವಸ್ಥೆಯನ್ನು ಮಾಡುವುದು ಸಾಮಾನ್ಯ ದಿನದಲ್ಲಿಯೇ ಕಷ್ಟವಾಗಿದ್ದು ಇಂತಹ ಪರಿಸ್ಥಿತಿಯಲ್ಲಿ ಅದು ಒಂದು ರೀತಿಯ ಸವಾಲೇ ಸರಿ.
ಗೋಶಾಲೆಗಳ ಗೋವಿನ ಆಹಾರ ಹಾಗೂ ಇನ್ನಿತರ ಅಗತ್ಯತೆಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಪರಮಯ್ಯ ಗಣೇಶ ಹೆಗಡೆ ( ಮಾಬ್ಲ ಹೆಗಡೆ ಮನೆ ಕರ್ಕಿ) ಇವರು ತಮ್ಮ ತಂದೆ ದಿವಂಗತ ಗಣೇಶ ಹೆಗಡೆ ಮತ್ತು ತಾಯಿ ದಿವಂಗತ ಗಣಪಿ ಹೆಗಡೆ ಇವರ ಸ್ಮರಣಾರ್ಥ ಕುಮಟಾ ತಾಲೂಕಿನ ಹೊಸಾಡದ ಅಮೃತಧಾರಾ ಗೋಶಾಲೆಗೆ ಒಂದು ಲಕ್ಷ ರೂಪಾಯಿಗಳನ್ನು ಸಮರ್ಪಿಸಿದರು.
ಈ ಆರ್ಥಿಕ ಸಹಕಾರ ಗೋ ಶಾಲೆಯ ನಿರ್ವಹಣೆಯ ದೃಷ್ಟಿಯಿಂದ ಅತ್ಯಂತ ಅಮೂಲ್ಯವಾದ ಮೊತ್ತವಾಗಿದ್ದು, ಪರಮಯ್ಯ ಹೆಗಡೆ ಕುಟುಂಬದವರು ಈ ಮೊದಲೂ ಸಹ ಗೋವಿನ ಮೇವಿಗೆ ಸಹಾಯ ಮಾಡಿರುವುದನ್ನು ಗೋ ಶಾಲಾ ಸಮಿತಿಯವರು ಈ ಸಂದರ್ಭದಲ್ಲಿ ಸ್ಮರಿಸಿದ್ದಾರೆ.
ಎಲ್ಲಾ ಆದಾಯದ ಮೂಲಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿರುವ ಇಂತಹ ಸಂದರ್ಭದಲ್ಲಿ ಗೋ ಪ್ರೇಮಿಗಳು ಇಂತಹ ಸ್ಥಿತಿಯಲ್ಲಿ ಗೋವಿಗಾಗಿ ಮಿಡಿಯಬೇಕಾದ ಅನಿವಾರ್ಯತೆ ಇದೆ ಎಂದು ಗೋಶಾಲೆಯ ಪ್ರಮುಖರು ವಿನಂತಿಸಿದ್ದಾರೆ.