ಭಟ್ಕಳ: ತಾಲೂಕಿನ ಪ್ರಮುಖ ದೇವಾಲಯಗಳಲ್ಲಿ ಒಂದಾದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಾಣೆಯಾಗಿದ್ದು ಜನರ ಮನಸ್ಸಿನಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡಿಸಿದೆ.

ಚಿನ್ನಾಭರಣಗಳನ್ನು ಗರ್ಭಗುಡಿಯ ಒಳಗೆ ಪೆಟ್ಟಿಗೆಯೊಂದರಲ್ಲಿ ಇಡಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಪೆಟ್ಟಿಗೆಯ ಬೀಗದ ಕೈಯನ್ನು ಇಟ್ಟುಕೊಂಡಿದ್ದ ದೇವಾಲಯದ ಅರ್ಚಕರೋರ್ವರು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಮಾಹಿತಿ ಲಭ್ಯವಾಗಿದೆ.

ಕಳುವಾದ ಚಿನ್ನಾಭರಣಗಳಲ್ಲಿ ಭಕ್ತರು ದೇವಿಗೆ ಕಾಣಿಕೆಯಾಗಿ ನೀಡಿದ್ದ ಕರಿಮಣಿ, ಹಾರ, ಉಂಗುರ, ಚಿನ್ನದ ಮೀನು, ಚಿನ್ನದ ಸಿಗಡಿ ಇತ್ಯಾದಿ ಸೇರಿವೆ. ಕಳುವಾದ ಚಿನ್ನಾಭರಣಗಳ ಮೊತ್ತ ರು.40 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.

RELATED ARTICLES  ಮನೆ ಮೇಲೆ ಮರ ಬಿದ್ದು ಅವಾಂತರ

ದೇವಾಲಯದಲ್ಲಿ ನಡೆಯುವ ವರ್ಧಂತಿ ಉತ್ಸವ, ನವರಾತ್ರಿ ಉತ್ಸವದಂತಹ ಸಂದರ್ಭದಲ್ಲಿ ದೇವಿಯನ್ನು ಚಿನ್ನಾಭರಣಗಳಿಂದ ಸಿಂಗರಿಸಲಾಗುತ್ತಿದ್ದು, ನಂತರ ಆ ಎಲ್ಲ ಚಿನ್ನಾಭರಣಗಳನ್ನು ಪೆಟ್ಟಿಗೆಯೊಂದರಲ್ಲಿ ಶೇಖರಿಸಿ ಗರ್ಭಗುಡಿಯಲ್ಲಿಯೇ ಇರಿಸಲಾಗುತ್ತಿತ್ತು ಎಂದು ಸ್ಥಳೀಯವಾಗಿ ಮಾಹಿತಿ ನೀಡಿದ್ದಾರೆ.

ನವರಾತ್ರಿ ಅಂಗವಾಗಿ ದೇವಿಗೆ ಚಿನ್ನಾಭರಣಗಳನ್ನು ತೊಡಿಸಲು ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ ಭಟ್ ಮುಂದಾಗಿದ್ದು, ಈ ಸಂಬಂಧ ಬೀಗದ ಕೈಯನ್ನು ಇರಿಸಿಕೊಂಡಿದ್ದ ದೇವಾಲಯದ ಇನ್ನೋರ್ವ ಅರ್ಚಕರಿಗೆ ಫೋನಾಯಿಸಿದ್ದಾರೆ. ಆದರೆ ಅವರು ಸಂಪರ್ಕಕ್ಕೆ ಬಾರದೇ ಇದ್ದಾಗ ಪೆಟ್ಟಿಯ ಬೀಗವನ್ನು ಒಡೆದು ತೆಗೆಯಲಾಗಿದ್ದು, ಪೆಟ್ಟಿಯಲ್ಲಿದ್ದ ಚಿನ್ನಾಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

RELATED ARTICLES  ಮುಂಡಗೋಡ: ಬೀದಿ ನಾಯಿ ಕಾಟಕ್ಕೆ ನಲುಗಿದ ಜನ

ನಂತರ ಪ್ರಧಾನ ಅರ್ಚಕ ನಾಗರಾಜ ಭಟ್, ದೇವಾಲಯದ ಆಡಳಿತ ಮಂಡಳಿಯ ಸದಸ್ಯರೊಂದಿಗೆ ಚರ್ಚಿಸಿ ಅವರ ಮೂಲಕವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಪಿಐ ದಿವಾಕರ ಸಿಬ್ಬಂದಿಗಳೊಡನೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.