ಯಲ್ಲಾಪುರ: ಸ್ಮಾರ್ಟ್ ಸಿಟಿ ಗಿಂತ ಸ್ಮಾರ್ಟ್ ಹಳ್ಳಿಗಳ ಕಡೆಗೆ ಹೆಚ್ಚು ಲಕ್ಷ ಕೊಡಬೇಕಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು .
ಅವರು ಮಂಗಳವಾರ ತಾಲೂಕಿನ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ ಕನೇನಹಳ್ಳಿಯ ಬಳಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗಳ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಯೋಜನೆಯಡಿ 4.49 ಕೋಟಿ ರೂ.ಗಳ ಅನುದಾನದ ನೆರವಿನಿಂದ ನಿರ್ಮಿಸಲಾಗುತ್ತಿರುವ 5.10 ಕಿ.ಮೀ ರಸ್ತೆಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ರಾಜ್ಯ ಸರಕಾರ ಜಾರಿಗೊಳಿಸಿರುವ ಉಪಯುಕ್ತ ಯೋಜನೆಗಳನ್ನು ಹಾಗೂ ನಮ್ಮ ಸರ್ಕಾರದ ಕ್ರಿಯಾಶೀಲತೆ ಕುರಿತು ಟೀಕಿಸುವವರು ಅನೇಕರಿದ್ದಾರೆ. ಆದರೆ ನಾವು ಮತದಾರರಿಗೆ ನೀಡಿದ್ದ ಭರವಸೆಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೆವೆ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇವೆ ನಂತರ ಮತ್ತೆ ಮತ ಕೇಳಲು ತೆರಳುತ್ತೆವೆ ಎಂದರು.
ಕಳೆದ 20 ವರ್ಷ ಈ ಕ್ಷೇತ್ರ ಪ್ರತಿನಿಧಿಸಿರುವ ಜನರಿಂದ ಕ್ಷೇತ್ರದ ಅಭಿವೃದ್ಧಿಯಾಗಿಲ್ಲ ಎಂದ ಅವರು, ಬರುವ ಕೆಲವೇ ದಿನಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ 94 ಕೋಟಿ ರೂ.ಗಳಷ್ಟು ರಸ್ತೆ ಕಾಮಗಾರಿಯ ಶಿಲನ್ಯಾಸ ಮಾಡಲಾಗುತ್ತಿದ್ದು, ಇದು ನಮ್ಮ ಸರಕಾರಕ್ಕೆ ಗ್ರಾಮೀಣ ಪ್ರದೇಶಗಳ ಮೇಲಿರುವ ಕಾಳಜಿಗೆ ಉದಾಹರಣೆಯಾಗಿದೆ.
ರಾಜ್ಯ ಸರಕಾರ ಜಾರಿಗೆ ತಂದಿರುವ ಆರೋಗ್ಯ ಭಾಗ್ಯ ಎಂಬ ಹೊಸ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಉಪಯೋಗವಾಗಲಿದೆ. ಈ ಯೋಜನೆಯಡಿ ರಾಜ್ಯದ ಸುಮಾರು 2.34 ಕೋಟಿ ಕುಟುಂಬಗಳು ಈ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಿಕೊಳ್ಳಲಿವೆ. ತಾಲೂಕಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಮ್ಮಚಗಿ ಗ್ರಾ.ಪಂ. ಅಧ್ಯಕ್ಷ ಗ.ರಾ.ಭಟ್ಟ ಹೆಬ್ಬಾರ್ ಈ ಕ್ಷೇತ್ರಕ್ಕೆ ಕೆಲಸ ತಂದಷ್ಟು ಹಿಂದೆ ಯಾರು ಕೆಲಸ ತಂದಿಲ್ಲ. ಇದರ ಪ್ರಯೋಜನ ಪಡೆದವರು ಜನರಿಗೆ ತಿಳಿಸಿ ಹೇಳಬೇಕೆಂದರು.
ಎ.ಪಿ.ಎಂ. ಸಿ ಅಧ್ಯಕ್ಷ ಎಂ.ಜಿ.ಭಟ್ಟ, ಸಣಕದಗುಂಡಿ ಮಾತನಾಡಿ, ಬಹಳಷ್ಟು ವರ್ಷದಿಂದ ಈ ಭಾಗಕ್ಕೆ ರಸ್ತೆಯ ಅಗತ್ಯವಿತ್ತು ಅದನ್ನು ಹೆಬ್ಬಾರ ಈಡೇರಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಕುಂದರಗಿ ಸೇ.ಸ.ಸಂಘದ ಅಧ್ಯಕ್ಷ ಹೇರಂಭ ಹೆಗಡೆ, ತಾ.ಪಂ. ಸದಸ್ಯೆ ರಾಧಾ ಹೆಗಡೆ, ಉದಯ ಭಟ್ಟ, ಮಂಗಲಾ ನಾಯ್ಕ ಮತ್ತಿತ್ತರರು ಉಪಸ್ಥಿತರಿದ್ದರು.