ಕುಮಟಾ : ತಾಲೂಕಿನ ಕೆಲವೆಡೆ ದನಗಳಿಗೆ ಚರ್ಮಗಂಟು ರೋಗ ಪ್ರಾರಂಭವಾಗಿದ್ದು ಜಾನುವಾರುಗಳನ್ನು ಸಾಕುವ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದೆ.

ಏನಿದು ಚರ್ಮ ಗಂಟು ರೋಗ?

ಇದು ವೈರಸ್‌ನಿಂದ ದನ ಮತ್ತು ಎಮ್ಮೆಗಳಿಗೆ ಬರುವ ಕಾಯಿಲೆ. ಸಿಡುಬು ರೋಗ ಹರಡುವ ವೈರಸ್ ಕುಟುಂಬದ ‘ಮೇಕೆ ಸಿಡುಬು’ ಜಾತಿಗೆ ಸೇರುತ್ತದೆ. ಕುರಿಗೆ ಹರಡುವ ಸಿಡುಬು ಸಹ ಇದೇ ಜಾತಿಯದ್ದು. ಈ ರೋಗವು ಮೂಲತಃ ಆಫ್ರಿಕಾ ದೇಶದ್ದು. ನಂತರ ಮಧ್ಯ ಪ್ರಾಚ್ಯ, ದಕ್ಷಿಣ-ಪೂರ್ವ ಯೂರೋಪ್, ರಷ್ಯಾ ಮತ್ತು ಕಜಕಿಸ್ಥಾನಗಳಲ್ಲಿ ಕ೦ಡುಬ೦ದಿತ್ತು. ಇತ್ತೀಚೆಗೆ, ನಮ್ಮ ದೇಶದ ಕೇರಳ ಮತ್ತು ಒಡಿಶಾದಲ್ಲಿ ಕಾಣಿಸಿಕೊಂಡಿತು.

ಈ ರೋಗ ಪ್ರಮುಖವಾಗಿ ಆರ್ದ್ರ ಬೇಸಿಗೆ(ಬೇಸಿಗೆ ಮುಗಿಯುವ – ಮುಂಗಾರು ಆರಂಭದ ಸಮಯ)ಯಲ್ಲಿ ರೋಗಗಳನ್ನು ಹರಡುವ ಸೊಳ್ಳೆಗಳಿಂದ (ಕ್ಯುಲೆಕ್ಸ್‌, ಏಡಿಸ್‌); ಕಚ್ಚುವ ನೊಣಗಳಿಂದ (ಸ್ಟೊಮಾಕ್ಸಿಸ್‌, ಸ್ಟೆಬಲ್(ಕುದುರೆ), ಬಯೋಮಿಯ) ಹಾಗೂ ಉಣ್ಣೆಗಳಿಂದ (ರೆಫಿಸೆಲಫಲಸ್ ಹಾಗೂ ಆಂಬ್ಲಿಯೋಮ) ಹರಡುತ್ತದೆ. ಈ ರೋಗವಿರುವ ಪ್ರಾಣಿಗಳ ನೇರ ಸಂಪರ್ಕದಿಂದಲೂ ಬರುತ್ತದೆ. ಕೆಲವೊಮ್ಮೆ ಕಲುಷಿತ ನೀರಿನಿಂದ, ಮೇವಿನಿಂದಲೂ ಹರಡುವ ಸಾಧ್ಯತೆ ಇದೆ. ಈ ವೈರಾಣು ಸದೃಢವಾಗಿದ್ದು, 55 ಡಿಗ್ರಿಯಲ್ಲಿ ಎರಡು ಗಂಟೆಯವರೆಗೂ, 65 ಡಿಗ್ರಿ ಉಷ್ಣತೆಯನ್ನು ಸುಮಾರು 30 ನಿಮಿಷಗಳವರೆಗೂ ತಡೆಯಬಲ್ಲದು.

ರೋಗ ಲಕ್ಷಣಗಳು

ಚರ್ಮಗಂಟು ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ, ಒಂದು ವಾರದ ನಂತರ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳು ತ್ತವೆ. ಅವು ಚರ್ಮ ಗಂತಿ/ಹಕ್ಕಳೆ/ತುರಿಗಳಾಗುತ್ತವೆ. ಇವುಗಳಲ್ಲಿ ವೈರಸ್‌ 35 ದಿನಗಳ ಕಾಲ ಉಳಿದಿರುತ್ತದೆ. ರಕ್ತ, ವೀರ್ಯ, ಜೊಲ್ಲು, ಕಣ್ಣು ಮತ್ತು ಮೂಗಿನ ಸ್ರವಿಕೆಗಳಲ್ಲಿ ಈ ವೈರಾಣುಗಳು ಇರುತ್ತವೆ. ರೋಗಗ್ರಸ್ತ ದನಗಳಲ್ಲಿ ಅತಿಯಾದ ಜ್ವರವಿದ್ದು, ಮ೦ಕಾಗಿ, ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವಂತಹ ಲಕ್ಷಣಗಳು ಗೋಚರಿಸುತ್ತವೆ. ಜತೆಗೆ, ದುಗ್ದರಸಗ೦ತಿಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

RELATED ARTICLES  ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಈ ರೋಗದಿಂದ ತೊಂದರೆ ಏನು?

ಆಕಳುಗಳಾದರೆ ಹಾಲು ಕೊಡುವ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗುತ್ತದೆ. ಕೆಲವು ರಾಸುಗಳು ಮೇವು ತಿನ್ನದೆ ಕ್ರಮೇಣವಾಗಿ ಬಡಕಲಾಗುತ್ತವೆ. ಇದು ಆಕಳು ಪೋಷಿಸುವವರಿಗಷ್ಟೇ ಅಲ್ಲದೇ, ಈ ಜಾನುವಾರುಗಳ ಚರ್ಮದ್ಯೋಮದರಿಗೂ ಭಾರಿ ನಷ್ಟವನ್ನು ಉಂಟುಮಾಡುತ್ತವೆ. ತಳಿ ಸ೦ವರ್ಧನೆ ಹೋರಿಗಳು ಬ೦ಜೆಯಾಗಬಹುದು. ಗರ್ಭ ಧರಿಸಿದ ಆಕಳುಗಳಲ್ಲಿ ಗರ್ಭಪಾತವಾಗಿ ಬಹುಕಾಲದವರಿಗೆ ಬೆದೆಗೆ ಬಾರದೇ ಉಳಿಯಬಹುದು. ಅಲ್ಲದೆ ಮಾಸು ಚೀಲದ ಮೂಲಕ ರೋಗಪ್ರಸರಣದ ಸಾಧ್ಯತೆಯೂ ಇದೆ.

ತುರ್ತಾಗಿ ಚಿಕಿತ್ಸೆ ಮಾಡಿಸದಿದ್ದರೆ ರೋಗ ಪೀಡಿತ ರಾಸುಗಳು ಬಡಕಲಾಗಿ, ಚರ್ಮದ ಗ್ರಂತಿಗಳು ಕೊಳೆತು, ನೊಣಗಳ ಉಪಟಳದಿ೦ದ ಚರ್ಮದಲ್ಲಿ ಆಳವಾದ ರ೦ಧ್ರಗಳಾಗುತ್ತವೆ. ಗುಂಪಿನಲ್ಲಿರುವ ಶೇ10 ರಿ೦ದ 20 ರಷ್ಟು ರಾಸುಗಳು ರೋಗಕ್ಕೆ ತುತ್ತಾಗಬಹುದು. ಅವುಗಳಲ್ಲಿ ಶೇ 1 ರಿ೦ದ 5 ರಷ್ಟು ರಾಸುಗಳು ಸಾವನ್ನಪ್ಪಬಹುದು.

ನಿಯ೦ತ್ರಣ ಮತ್ತು ತಡೆಗಟ್ಟುವಿಕೆ

ರೋಗ ಪೀಡಿತ ರಾಸುಗಳನ್ನು ಆರೋಗ್ಯವ೦ತ ಪ್ರಾಣಿಗಳಿ೦ದ ಬೇರ್ಪಡಿಸಿ ಕೂಡಲೆ ಚಿಕಿತ್ಸೆಗೆ ಒಳಪಡಿಸಬೇಕು. ವೈದ್ಯರ ಸೂಚನೆಯ ಮೇರೆಗೆ ಆ್ಯಂಟಿಬಯೋಟಿಕ್, ನೋವು ನಿವಾರಕ, ಆ್ಯಂಟಿಹಿಸ್ಟಮೈನ್‌ಗಳ (ಅಲರ್ಜಿ ನಿವಾರಕ ಔಷಧ) ಜೊತೆಗೆ ನೊಣನಿವಾರಕ ಮುಲಾಮು ಹಚ್ಚಿ ಸೊಳ್ಳೆ/ ನೊಣಗಳ ಹಾವ ಳಿಯನ್ನು ಹತೋಟಿಯಲ್ಲಿಡಬೇಕು. ರಾಸುಗಳನ್ನು ಸಾಕುವವರು ಸಾಧ್ಯವಾದಲ್ಲಿ ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ರೋಗ ಕಾಣಿಸಿಕೊಳ್ಳುವ ಪ್ರದೇಶದಲ್ಲಿ ರಾಸುಗಳ ಸಾಗಾಣಿಕೆ, ಜಾತ್ರೆ, ಪಶು ಮೇಳಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

RELATED ARTICLES  ವಿಶ್ವ ಪರಿಸರ ದಿನ : ಗಿಡ ನೆಟ್ಟು ಸಂಭ್ರಮಿಸಿದ ಮಕ್ಕಳು.

ಪಶುವೈದ್ಯರ ಸಲಹೆ ಮೇರೆಗೆ ದನದ ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ ಸೂಕ್ತವಾದ ಅ೦ಟುಜಾಡ್ಯ ನಿವಾರಕಗಳಾದ ಸೋಡಿಯಂ ಹೈಪೊಕ್ಲೋರೇಟ್ (ಶೇ 2 ರಿಂದ 3ರಷ್ಟು), ಶೇ 2ರಷ್ಟು ವಿರ್ಕಾನ್, 1:33 ಅನುಪಾತದಲ್ಲಿ ಅಯೋಡಿನ್‌, ಶೇ 20ರಷ್ಟು ಈಥರ್‌, ಶೇ 1 ರಷ್ಟು ಕ್ಲೋರೋಫಾರ್ಮ್‌ ಫಾರ್ಮುಲಿನ್‌ಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸಿ೦ಪಡಿಸಬೇಕು.

ರೋಗಗ್ರಸ್ಥ ರಾಸುಗಳು ಚೇತರಿಸಿಕೊಳ್ಳಲು ಕನಿಷ್ಠ ಎರಡರಿಂದ ಮೂರು ವಾರಗಳ ಚಿಕಿತ್ಸೆ ಅಗತ್ಯ. ಒಂದು ಪಕ್ಷ ಈ ರೋಗದಿಂದ ರಾಸುಗಳು ಸಾವನ್ನಪ್ಪಿದರೆ, ಅವುಗಳ ಕಳೇಬರಕ್ಕೆ ಅ೦ಟುಜಾಡ್ಯ ನಿವಾರಕವನ್ನು ಸಿ೦ಪಡಿಸಿ, ಆಳವಾಗಿ ಗುಂಡಿ ತೆಗೆದು ಹೂಳಬೇಕು. ಹೊರದೇಶದಲ್ಲಿ ಲಸಿಕೆಗಳು ಲಭ್ಯವಿದ್ದು; ಉಳಿದ ದೇಶಗಳಲ್ಲಿ ರೋಗ ತೀವ್ರಗೊಂಡ ಸ೦ದರ್ಭಗಳಲ್ಲಿ, ಮೇಕೆ /ಕುರಿ ಸಿಡುಬಿನ ಲಸಿಕೆಯನ್ನೇ ಉಪಯೋಗಿಸಿ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯ೦ತ್ರಿಸಿದ ನಿದರ್ಶನಗಳಿವೆ.

ಹಳ್ಳಿಗಳಲ್ಲಿ ಔಷಧವನ್ನೂ ಬಳಸಬಹುದಾಗಿದ್ದು

ಒಂದು ದಿನಕ್ಕೆ ಹತ್ತು ಗ್ರಾಂ ಶುಂಠಿ 30 ಗ್ರಾಂ ಅಮೃತಬಳ್ಳಿ, ಐದರಿಂದ ಏಳು ಲವಂಗ, ಐದರಿಂದ ಎಂಟು ಕರಿಮೆಣಸು, ಎರಡು ಲೀಟರ್ ನೀರಿಗೆ ಹಾಕಿ ಕುದಿಸಿ ಆರಿಸಬೇಕು. ನೊಣ ಹಾರದಂತೆ ಬೇವಿನೆಣ್ಣೆ ಕರ್ಪೂರ ಸೇರಿಸಿ ಹಚ್ಚಬಹುದು ಎನ್ನುತ್ತಾರೆ ಹಿರಿಯ ಗೋ ಸಾಕಾಣಿಕಾದಾರು.

ಕುಮಟಾ ತಾಲೂಕಿನ ಹಲವೆಡೆಗಳಲ್ಲಿ ಈ ರೋಗ ಕಾಣಿಸಿಕೊಂಡ ಬಗ್ಗೆ ಸ್ಥಳೀಯ ವರದಿ ಸಿಕ್ಕಿದ್ದು, ಜಾನುವಾರು ಸಾಕುವವರು ಈ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಬೇಕಾಗಿದೆ.