ಕಥೆಗಾರ್ತಿ ಜಯಾ ಯಾಜಿ ಶಿರಾಲಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 

ಸಂಧ್ಯಾ ನಾಯ್ಕ, ಗಣೇಶ ಜೋಶಿ, ಸುಧಾರಾಣಿ ನಾಯ್ಕ, ರಾಘವೇಂದ್ರ ಶೇಟ್ ಅವರಿಗೆ ಯುವ ಪುರಸ್ಕಾರ

ಕಾರವಾರ: ಹಿರಿಯ ಕಥೆಗಾರ್ತಿ ಭಟ್ಕಳದ ಜಯಾ ಯಾಜಿ ಶಿರಾಲಿ ಅವರನ್ನು 2020ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಸಮಿತಿ ಗುರುತಿಸಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರೂ. 15,000, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸನ್ಮಾನವನ್ನೊಳಗೊಂಡಿರುತ್ತದೆ.

img 1603891501472
ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದರೊಟ್ಟಿಗೆ ನಾಲ್ವರು ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರವನ್ನು ಜಿಲ್ಲಾ ಕ.ಸಾ.ಪ. ನೀಡುತ್ತಿದೆ. ಈ ಪುರಸ್ಕಾರಕ್ಕೆ ಕುಮಟಾದ ಸಂಧ್ಯಾ ನಾಯ್ಕ ಅಘನಾಶಿನಿ, ಹೊನ್ನಾವರದ ಗಣೇಶ ಜೋಶಿ ಸಂಕೊಳ್ಳಿ, ಸಿದ್ದಾಪುರದ ಸುಧಾರಾಣಿ ನಾಯ್ಕ, ಶಿರಸಿಯ ರಾಘವೇಂದ್ರ ಡಿ. ಶೇಟ್ ಅವರನ್ನು ಆಯ್ಕೆ ಸಮಿತಿ ಗುರುತಿಸಿದೆ.

RELATED ARTICLES  ಹಾಡು ಹಗಲೇ ಅಂಗಡಿಯ ಪಟ್ಟಿಗೆಯಿಂದ ಹಣ ಎಗರಿಸಿದ ಕಳ್ಳರು

ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರವು ಪ್ರಶಸ್ತಿ ಫಲಕ, ಅಧ್ಯಯನಯೋಗ್ಯ ಕೃತಿಯನ್ನೊಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.8 ರಂದು ರವಿವಾರ ಭಟ್ಕಳದ ಶಿರಾಲಿ ಜನತಾ ವಿದ್ಯಾಲಯದ ಸಬಾಭವನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾಹಿತಿ ನೀಡಿದ್ದಾರೆ.

2016 ರಿಂದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿ ವರ್ಷ ಹಿರಿಯ ಸಾಹಿತಿಯೊಬ್ಬರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಲ್ವರು ಉದಯೋನ್ಮುಖ ಬರಹಗಾರರಿಗೆ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ನೀಡುತ್ತ ಬಂದಿದೆ. ಇಲ್ಲಿಯವರೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಿರಿಯ ಸಾಹಿತಿಗಳಾದ ಹೊನ್ನಾವರದ ಸುಮುಖಾನಂದ ಜಲವಳ್ಳಿ, ಸಿದ್ದಾಪುರದ ಆರ್.ಪಿ.ಹೆಗಡೆ ಸೂಳಗಾರ, ಅಂಕೋಲಾದ ಶಾಂತಾರಾಮ ನಾಯಕ ಹಿಚಕಡ, ಶೀರಸಿಯ ವಿಜಯನಳಿನಿ ರಮೇಶ್ ಅವರಿಗೆ ಸಂದಿದ್ದು ಇದೀಗ ಭಟ್ಕಳದ ಜಯಾ ಯಾಜಿ ಶಿರಾಲಿ ಅವರಿಗೆ ಈ ಗೌರವ ಸಲ್ಲುತ್ತಿದೆ ಎಂದು ಕರ್ಕಿಕೋಡಿ ಹೇಳಿದ್ದಾರೆ.

ಜಯಾ ಯಾಜಿ ಅವರ ಸಂಕ್ಷಿಪ್ತ ಪರಿಚಯ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಜಯಾ ಯಾಜಿ ಅವರು ಮದುವೆಯ ಪೂರ್ವದಲ್ಲಿ ಅಗಸೂರು ಜಯಾ, ‘ಸಹ್ಯಾದ್ರಿ’ ಎಂಬ ಹೆಸರಿನಿಂದ ಬರೆಯುತ್ತಿದ್ದರು. ಲೇಖಕ ಶಿರಾಲಿಯ ನಾರಾಯಣ ಯಾಜಿ ಅವರನ್ನು ಮದುವೆಯಾದ ಮೇಲೆ ‘ಜಯಾ ಯಾಜಿ ಶಿರಾಲಿ’ ಎಂಬ ಹೆಸರಿನಲ್ಲಿ ಸಾಹಿತ್ಯದ ಫಸಲು ನೀಡುತ್ತಿದ್ದಾರೆ.

RELATED ARTICLES  ಗಮನ ಸೆಳೆದ ವಿಜ್ಞಾನ ಮಾದರಿ ಪ್ರದರ್ಶನ : ಎಕ್ಸ್ಪೋ 2022 ಸಂಪನ್ನ

ಜಯಾ ಯಾಜಿ ಅವರ ಕೃತಿಗಳು : ಶಂಕ್ರಿ, ಅವಲೋಕನ (ಕಥಾ ಸಂಕಲನ), ಗುಟ್ಟು ಗುಟ್ಟೇ, ಮಂದಹಾಸ (ವಿನೋದ ಬರಹಗಳ ಸಂಕಲನ), ಜಾಜಿ ಗಿಡದ ಗುಬ್ಬಿಗಳು ( ಪ್ರಬಂಧ ಸಂಕಲನ), ಗಿಣಿಮರಿ ( ಮಕ್ಕಳ ಕವನ ಸಂಕಲನ) ಹೀಗೆ ಅವರ ಕೃತಿಗಳು ಕನ್ನಡ ಸಾರಸ್ವತ ಲೋಕದ ಗಮನ ಸೆಳೆದಿವೆ. ಜಯಾ ಯಾಜಿ ಅವರ ಕಥೆ ತೆಲುಗಿಗೂ ಭಾಷಾಂತರಗೊಂಡಿದೆ. ಅವರ ಅನೇಕ ಬರಹಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ.

ಪಡೆದ ಮನ್ನಣೆ : ಜಯಾ ಯಾಜಿ ಅವರಿಗೆ ಕೊಡಗಿನ ಗೌರಮ್ಮ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದ್ಯೋನ್ಮುಖ ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಹವ್ಯಕ ಸಾಹಿತ್ಯ ಪ್ರಶಸ್ತಿ ಲಭಿಸಿದ್ದು ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ಹಾಗೂ ಭಟ್ಕಳ ತಾಲೂಕು ಆಡಳಿತ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.