ಕುಮಟಾ: ತಾಲೂಕಿನ ಬರಗದ್ದೆ ಗ್ರಾಮೀಣ ಸೇವಾ ಸಹಕಾರಿ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದು, ಇದು ಜಿಲ್ಲೆಯಾದ್ಯಂತ ಸುದ್ದಿಯಾಗಿತ್ತು.ಈಗ ಸಂಘಕ್ಕೆ ಭಾನುವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿದ್ದು, ಗಣಪತಿ ಗೋಪಾಲಕೃಷ್ಣ ಹೆಗಡೆ ಮುಂದಿನ ಐದು ವರ್ಷದ ಅವಧಿಗೆ ಅಧ್ಯಕ್ಷರಾಗಿ, ಮಹಾಬಲೇಶ್ವರ ಗಜಾನನ ಭಟ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆಯ ಹಾದಿ ತುಳಿದಿದ್ದ ಸಂಘದ ರೈತ ಸದಸ್ಯರು, ನ್ಯಾಯಕ್ಕಾಗಿ ಸಿಡಿದೆದ್ದು ಸುದೀರ್ಘ ಹೋರಾಟವನ್ನೇ ನಡೆಸಿದ್ದರು. ಈಗ ಈ ಹೋರಾಟ ಒಂದು ನಿರ್ಣಾಯಕ ಹಂತಕ್ಕೆ ತಲುಪಿದಂತೆ ಕಾಣುತ್ತಿದೆ. ಇತ್ತಿಚೆಗೆ ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಿದ್ದು, ಹೊಸ ಮುಖಗಳು ಸಂಘಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲಾ 11 ಕ್ಷೇತ್ರದಲ್ಲೂ ತಮ್ಮದೇ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರೈತ ಹೋರಾಟಗಾರರು ಹಳೆಯ ಆಡಳಿತವನ್ನು ತಿರಸ್ಕರಿಸಿದ್ದರು.
ಕಳೆದೆರಡು ವರ್ಷಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ನಡೆಯುತ್ತಲೇ ಬಂದಿದ್ದು, ಕೊನೆಗಳಿಗೆಯ ಕ್ಲೈಮಾಕ್ಸ್ಎನಿಸಿಕೊಂಡ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಹಾಲಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳು ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ ವೇಳೆ ಸಂಘದ ಬಾಗಿಲು ತೆರೆಯಲು ಬರಲಿಲ್ಲ ಎಂಬ ಆರೋಪ ಎದುರಿಸುವಂತಾಗಿದೆ. ಹೀಗಾಗಿ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಸಂಘದ ಬಾಗಿಲು ಹಾಕಿದ್ದರೂ, ಹೊರಗಡೆಯೇ ಈ ಚುನಾವಣಾ ಪ್ರಕ್ರಿಯೆ ನಡೆಯಿತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಣಪತಿ ಗೋಪಾಲಕೃಷ್ಣ ಹೆಗಡೆ, ಅನ್ಯಾಯವಾದ ರೈತರಿಗೆ ನ್ಯಾಯ ಕೊಡಿಸುವುದು ನಮ್ಮ ಮೊದಲ ಆದ್ಯತೆ. ಅಲ್ಲದೆ, ಇದುವರೆಗೆ ಏನೆಲ್ಲಾ ಅನ್ಯಾಯ, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತೋ ಅದನ್ನೆಲ್ಲ ಪರಿಶೀಲಿಸಿ, ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.