ಉಡುಪಿ: ಯಕ್ಷಗಾನ ರಂಗದ ಹಿರಿಯ ಕಲಾವಿದ ವಾಸುದೇವ ಸಾಮಗ ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ಯಕ್ಷಗಾನದ ಅಪೂರ್ವ ಕಲಾವಿದರಾಗಿದ್ದ ಮಲ್ಪೆ ರಾಮದಾಸ ಸಾಮಗರ ಪುತ್ರರಾದ ವಾಸುದೇವ ಸಾಮಗ ಕೋಟೇಶ್ವರ ನಿವಾಸಿಯಾಗಿದ್ದು ಧರ್ಮಸ್ಥಳ, ಕದ್ರಿ, ಕರ್ನಾಟಕ ಮೇಳ(ಸುರತ್ಕಲ್), ಸಾಲಿಗ್ರಾಮ ಮೇಳದ ಪ್ರಮುಖ ವೇಷಧಾರಿಯಾಗಿ ಜನ ಮನ ಸೆಳೆದಿದ್ದರು. ಸಂಯಮ ಸಂಸ್ಥೆ ಮೂಲಕ ತಾಳಮದ್ದಳೆಗೆ ಹೊಸ ಆಯಾಮ, ಹೊಸ ಶಿಸ್ತು ನೀಡಿದ್ದ ಇವರು ತಾಳಮದ್ದಲೆಯಲ್ಲಿ ಇದ್ದಾರೆಂದರೆ ಜನರು ಹುಡುಕಿಕೊಂಡು ಕಾರ್ಯಕ್ರಮ ನೋಡಲು ಬರುತ್ತಿದ್ದರು.
ತೆಂಕು-ಬಡಗುತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಸವ್ಯಸಾಚಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಸಾಮಗರು, ನಾರಣಪ್ಪ ಉಪ್ಪೂರರ ಒಡನಾಡದಲ್ಲಿ ಪರಿಪೂರ್ಣ ಕಲಾವಿದರಾಗಿ ಹೊರಹೊಮ್ಮಿದ್ದರು. ಅನೇಕ ಯಕ್ಷಗಾನ ಪ್ರಸಂಗಗಳಲ್ಲಿ ನಾಯಕ, ಪ್ರತಿನಾಯಕ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ ಇವರು, ವಿಭಿನ್ನ ನಿಲುವಿನ ಕೈಕೆ, ದಶರಥ, ದೇವವ್ರತ, ಭೀಷ್ಮ, ಕಂಸ, ಕೃಷ್ಣ, ರುಕ್ಮಾಂಗದ- ಮೋಹಿನಿ, ಅಂಬೆ-ಪರಶುರಾಮ, ಮಂಥರೆ ಮುಂತಾದ ಪಾತ್ರಗಳನ್ನು ನಿರ್ವಹಿಸಿ ತನ್ನ ವೈಚಾರಿಕ ನಿಲುವಿನಿಂದ ಸಮರ್ಥಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದರು.
ತನ್ನ ತಂದೆ ಮತ್ತು ದೊಡ್ಡಪ್ಪ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಸಹಜವಾಗಿಯೇ ಅತ್ತ ಒಲವು ಬೆಳೆಸಿಕೊಂಡ ಸಾಮಗರು, ತನ್ನ ವಾಕ್ಚಾತುರ್ಯದಿಂದಲೇ ಯಕ್ಷಗಾನ ರಂಗದಲ್ಲಿ ‘ಸಾಮಗೆರ್’ ಎಂದು ಪ್ರಸಿದ್ಧಿ ಪಡೆದಿದ್ದರು. ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದ ಮಲ್ಪೆ ವಾಸುದೇವ ಸಾಮಗರು, ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ನಿಧನರಾಗಿದ್ದಾರೆ.