ಕುಮಟಾ: ಸರ್ಕಾರಿ ಶಾಲೆಯ ಮಹತ್ವ, ಬಾಲ್ಯದ ಸಂತೋಷದಿಂದ ವಂಚಿತರಾಗುವ ಮಕ್ಕಳು, ಇಂದಿನ ಕಾಲದ ಪಾಲಕರ ಮನಸ್ಥಿತಿ ಬಗ್ಗೆ ಕಥಾವಸ್ತುವನ್ನು ಹೊಂದಿರುವ, ಪತ್ರಕರ್ತ ವಿನಾಯಕ ಬ್ರಹ್ಮೂರು ನಿರ್ದೇಶನದ ‘ಬರ್ಲಿ’ ಕಿರುಚಿತ್ರದ ಚಿತ್ರೀಕರಣ ತಾಲ್ಲೂಕಿನ ವಿವಿಧ ತಾಣಗಳಲ್ಲಿ ನಡೆಯಿತು.
ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾ ಕೇಂದ್ರ, ಕುಮಾರ ಕೌರಿ ತೊರ್ಕೆ ಅವರ ನಳಿನಿ ನಿವಾಸ, ಸುಖ ಸಾಗರ ಹೋಟೆಲ್, ಮಾಸ್ತಿಕಟ್ಟೆ ಸರ್ಕಲ್ ಮುಂತಾದ ಭಾಗಗಳಲ್ಲಿ ಚಿತ್ರೀಕರಣ ಕಂಡಿತು. ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿನಾಯಕ ಬ್ರಹ್ಮೂರು ಅವರದ್ದಾಗಿದ್ದು ಇದು ಅವರ 7 ನೇ ಚಿತ್ರವಾಗಿದೆ. ಇವುಗಳಲ್ಲಿ ಮೂರು ಸೆಮಿ ಫೀಚರ್ ಸಿನಿಮಾಗಳೂ ಸೇರಿವೆ. ಈ ಚಿತ್ರಕ್ಕೆ ಮೇದಿನಿ ಹೆಗಡೆ ಅವರು ಕೂಡ ಸಂಭಾಷಣೆ, ಚಿತ್ರಕಥೆಯನ್ನು ನಿರ್ವಹಿಸಿದ್ದಾರೆ.
ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಕಾರವಾರದ ಪುಟಾಣಿ ದೀಕ್ಷಾ ರೇವಣಕರ್, ಭಟ್ಕಳದ ಡಾ.ಸವಿತಾ ಭಟ್ಟ, ಹಿರಿಯ ಪತ್ರಕರ್ತರಾದ ವಸಂತಕುಮಾರ್ ಹೆಗಡೆ ಕತಗಾಲ್, ಮಿರ್ಜಾನಿನ ಮಂಜುನಾಥ ಭಟ್ಟ, ಶಿಕ್ಷಕಿಯರಾದ ಹೊನ್ನಾವರದ ಸ್ವಾತಿ ಪಿ. ಶೇಟ್, ಕುಮಟಾ ಕೊಂಕಣದ ಭವಾನಿ ಭಟ್ಟ, ಕುಮಟಾದ ಪತ್ರಕರ್ತ ಮಿತ್ರ ರಾಘವೇಂದ್ರ ದಿವಾಕರ್, ಕಾರವಾರದ ದರ್ಶನ ರಾಯ್ಕರ್, ನಿತ್ಯಾನಂದ ರಾಯ್ಕರ್ ತಮ್ಮ ಚಿತ್ರೀಕರಣದ ಅನುಭವದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಮಾರ ಕೌರಿ ಕುಟುಂಬದ ಸದಸ್ಯರು, ಕೊಂಕಣ ಟ್ರಸ್ಟ್ ನ ಮುರಳೀಧರ ಪ್ರಭು, ಶಿಕ್ಷಕ ಗಣೇಶ ಜೋಶಿ, ಸುಖಸಾಗರ ಹೋಟೆಲ್ ಮಾಲೀಕರಾದ ಸಂಪತ್ ನಾಯರಿ, ಸಂಕಲನಕಾರ ಹರ್ಷಿತ ಅಂಬಿಗ, ಪತ್ರಕರ್ತರಾದ ಚರಣ ನಾಯ್ಕ, ಜ್ಯೋತಿ ರೇವಣಕರ್, ರಶ್ಮಿ ಮಿರ್ಜಾನ್ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಚಿತ್ರೀಕರಣದಲ್ಲಿ ಸಹಕರಿಸಿದ್ದಾರೆ.
ಚಿತ್ರೀಕರಣದ ಸಮಯದಲ್ಲಿ ತಂಡವನ್ನು ಭೇಟಿ ಮಾಡಿ ಶುಭ ಹಾರೈಸಿ ಮಾಧ್ಯಮದ ಜೊತೆಗೆ ಮಾತನಾಡಿದ
ಲಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರು, ವಿಭಿನ್ನ ಕಥಾವಸ್ತುವಿನೊಂದಿಗೆ ಹಲವಾರು ಕಿರುಚಿತ್ರಗಳನ್ನು ಮಾಡಿ ಉತ್ತರಕನ್ನಡದಲ್ಲಿ ತಮ್ಮದೇ ಛಾಪು ಮೂಡಿಸಿರುವ ಬ್ರಹ್ಮೂರ್ ಅವರು ಹೀಗೆಯೇ ಇನ್ನಷ್ಟು ಪ್ರಯೋಗಗಳನ್ನು ಮಾಡುತ್ತಾ ಸ್ಥಳೀಯ ಪ್ರತಿಭೆಗಳನ್ನು ಮುಖ್ಯ ಭೂಮಿಕೆಗೆ ತರಬೇಕು ಎಂದು ಹೇಳಿದರು.
ಸಿನಿಮಾಟೋಗ್ರಫಿ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಾರವಾರದ ದಿಲೀಪ ರೇವಣಕರ್ ಅವರ ಬಗ್ಗೆ ಚಿತ್ರತಂಡವು ಮೆಚ್ಚುಗೆ ವ್ಯಕ್ತಪಡಿಸಿದೆ. ಅವರಿಗೆ ದರ್ಶನ್ ರಾಯ್ಕರ್ ಸಾಥ್ ನೀಡಿದ್ದಾರೆ. ಗೋಕರ್ಣದ ಗಣೇಶ್ ನಾಯಕ ಅವರ ಡ್ರೋನ್ ಕ್ಯಾಮೆರಾವು ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದೆ. ಜಿ.ಪಂ. ಸದಸ್ಯ ಗಜಾನನ ಪೈ, ಉದ್ಯಮಿ ಧೀರು ಶಾನಭಾಗ, ಜಿ.ಪಂ. ಸದಸ್ಯ ಶಿವಾನಂದ ಹೆಗಡೆ ಕಡತೋಕಾ, ಕಲ್ಪನಾ ಅರುಣ್ ಅವರ ಚಿತ್ರ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.
ಕುಮಟಾ ಭಾಷೆಯಲ್ಲೇ ಸಂಭಾಷಣೆ
ಇದೇ ಮೊದಲ ಬಾರಿಗೆ ಚಿತ್ರದಲ್ಲಿ ಕುಮಟಾ ಸ್ಥಳೀಯ ಭಾಷೆಯನ್ನು ಬಳಕೆ ಮಾಡಲಾಗಿದೆ. ಪಟಗಾರನ ಪಾತ್ರದಲ್ಲಿ ಪತ್ರಕರ್ತ ವಸಂತಕುಮಾರ್ ಕತಗಾಲ್ ಅವರು ಗಮನ ಸೆಳೆದಿದ್ದಾರೆ. ಚಿತ್ರದ ಕಥೆಯ ತಿರುವಿಗೆ ಇವರ ಪಾತ್ರದ ಎಂಟ್ರಿ ಪ್ರಾಮುಖ್ಯತೆ ವಹಿಸಲಿದೆ ಎಂದು ನಿರ್ದೇಶಕ ವಿನಾಯಕ ಬ್ರಹ್ಮೂರು ತಿಳಿಸಿದ್ದಾರೆ.