ಕುಮಟಾ : ಚಿತ್ರಗಿ ಮಹಾತ್ಮಗಾಂಧಿ ಪ್ರೌಢಶಾಲೆಯ 1989ನೇ ಸಾಲಿನಲ್ಲಿ ಎಸೆಸೆಲ್ಸಿ ಪೂರ್ಣಗೊಳಿಸಿದ ಬೆಂಚ್ ಮೇಟಗಳಾದ ಸತೀಶ್ ಈಶ್ವರ್ ನಾಯ್ಕ ಮತ್ತು ನಾಗೇಶ್ ಭಟ್ ಮಿತ್ರದ್ವಯರು ತಾವು ಕಲಿತ ವಿದ್ಯಾಸಂಸ್ಥೆಗೆ ಮೂವತ್ತು ಸಾವಿರ ರೂಪಾಯಿಯ ಎಪ್ಸನ್ ಎಲ್ಸಿಡಿ ಪ್ರೋಜೆಕ್ಟರ್ ಅನ್ನು ಕಾಣಿಕೆಯಾಗಿ ನೀಡಿ ಆದರ್ಶ ಮೆರೆದರು.
ಈ ಸಂದರ್ಭದಲ್ಲಿ ಜರುಗಿದ ಕಿರು ಸಮಾರಂಭದಲ್ಲಿ ಶಾಲಾ ಪ್ರಭಾರ ಮುಖ್ಯಾಧ್ಯಾಪಕ ವಿ.ಎನ್. ಭಟ್ ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯವೂ ಪರಿಣಾಮಕಾರಿಯೂ ಆಗಿರುವ ಪ್ರಾಜೆಕ್ಟರ ನೀಡಿದ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ, ಇದರ ಸದುಪಯೋಗ ಈಗಿನ ಹಾಗೂ ಭವಿಷತ್ತಿನ ಎಲ್ಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮುಟ್ಟುವಂತೆ ಮಾಡುವುದಾಗಿ ಭರವಸೆಯನ್ನಟ್ಟು, ಈರ್ವರನ್ನು ಫಲತಾಂಬೂಲ – ಶಾಲಿನೊಂದಿಗೆ ಸನ್ಮಾನಿಸಿ ಗೌರವಿಸಿದರು. ವಿಶೇಷ ಅತಿಥಿಗಳಾಗಿ, ಸತೀಶ್ ಮತ್ತು ನಾಗೇಶರವರ ಪ್ರೌಢಶಾಲಾ ಗುರುಗಳಾದ ಶ್ರೀ ಡಿ. ಜಿ. ಶಾಸ್ತ್ರಿಯವರು ಭಾಗವಹಿಸಿ, ಇಬ್ಬರೂ ಶಿಷ್ಯಂದಿರಿಗೆ ಹರಿಸಿದರು.
ಶಾಲಾ ಪರಿಸರ ವೀಕ್ಷಿಸಿ, ಸವಿನೆನಪುಗಳನ್ನು ಮೆಲಕು ಹಾಕುತ್ತಾ ಈರ್ವರೂ ಗೆಳೆಯರು ಶಾಲೆಯ ಬಗ್ಗೆ ಸದಾಅಭಿಪ್ರಾಯವನ್ನು ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿಯೂ ಸಹಾಯ ಸಹಕಾರವನ್ನು ಮುಂದುವರಿಸುವ ಆಶ್ವಾಸನೆಯನ್ನು ನೀಡಿದರು. ಮಧ್ಯಾಹ್ನದ ಔತಣಕೂಟದೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.ಈ ಎಲ್ಲ ಕಾರ್ಯಕ್ರಮ ಸಂಘಟನೆಗೆ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಸಹಕರಿಸಿ, ಸಾಕ್ಷೀಭೂತರಾದರು.