ಯಲ್ಲಾಪುರ : ನವೆಂಬರ್ 20ರಂದು ಯಲ್ಲಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿ ನಂತರ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಯಲ್ಲಾಪುರದ ಸಮೀಪದ ಗಣೇಶ್ ಪಾಲ್ ಹೊಳೆಯಲ್ಲಿ ಇಂದು ಪತ್ತೆಯಾಗಿವೆ.
ತಾಲ್ಲೂಕಿನ ಹಿತ್ಲಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನ ಮೂವರು ಮನೆಯಿಂದ ಕಾಣೆಯಾಗಿದ್ದ ಬಗ್ಗೆ ವರದಿಯಾಗಿತ್ತು. ಇಂದು ಅವರು ಶವವಾಗಿ ಪತ್ತೆಯಾಗಿದ್ದಾರೆ.
ರಾಜೇಶ್ವರಿ ನಾರಾಯಣ ಹೆಗಡೆ , ವಾಣಿ ಪ್ರಕಾಶ್.ವೈ ಹಾಗೂ ವಾಣಿ ಅವರ, ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಮೃತರಾದವರಾಗಿದ್ದಾರೆ.
ಹಲವೆಡೆ ಹುಡುಕಾಡಿದ ಮನೆಯವರು ಭಾನುವಾರ, ದೂರು ನೀಡಲು ಯಲ್ಲಾಪುರ ಪೊಲೀಸ್ ಠಾಣೆಗೆ ಬಂದಿದ್ದರು. ಆದ್ರೆ ಈ ವೇಳೆ ಗಣೇಶ್ ಪಾಲ್ ಹೊಳೆಯಲ್ಲಿ ಮೃತದೇಹಗಳು ಸಿಕ್ಕಿರುವ ಮಾಹಿತಿ ಲಭಿಸಿದ್ದು, ಕುಟುಂಬದವರೊಂದಿಗೆ ತೆರಳಿ ಮೃತದೇಹ ಪರೀಕ್ಷೆ ಮಾಡಿದಾಗ ಗುರುತು ಪತ್ತೆಯಾಗಿದೆ.
ವಾಣಿಯ ಪತಿಯ ಮನೆಯು ಶಿವಮೊಗ್ಗದಲ್ಲಿದ್ದು, ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಇಂದು ನಿಗದಿ ಮಾಡಲಾಗಿತ್ತು . ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.