ಕುಮಟಾ: ತಾಲೂಕಾ ಪ್ರೌಢಶಾಲಾ ವಿಜ್ಞಾನ ವಿಷಯ ಬೋಧನಾ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ನೇಮಕವು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಲೋಕನಾಥ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶ್ರೀಧರ್ ಎನ್. ನಾಯ್ಕ ಅವರ ಹೆಸರನ್ನು ನಿಕಟಪೂರ್ವ ವಿಜ್ಞಾನ ಸಂಘದ ಅಧ್ಯಕ್ಷ, ನಿವೃತ್ತ ಮುಖ್ಯಾಧ್ಯಾಪಕ, ಎನ್.ಆರ್.ಗಜು ಪ್ರಕಟಿಸಿದರು.
ಉಪಾಧ್ಯಕ್ಷರಾಗಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕಿ ಮಧುರಾ ದೇಸಾಯಿ, ಕೆ.ಪಿ.ಸಿ ನೆಲ್ಲೇಕೇರಿಯ ಶಿಕ್ಷಕ ಬೀರದಾಸ ಗುನಗಾ, ಕಾರ್ಯದರ್ಶಿಯಾಗಿ ಪ್ರಗತಿ ವಿದ್ಯಾಲಯ ಮೂರೂರಿನ ಮುಖ್ಯಾಧ್ಯಾಪಕ ವಿವೇಕ ಆಚಾರಿ ಹಾಗೂ ಖಜಾಂಚಿಯಾಗಿ ಸಿ.ವಿ.ಎಸ್ಕೆ ಪ್ರೌಢಶಾಲೆಯ ಶಿಕ್ಷಕ ಭಾಸ್ಕರ ಹೆಗಡೆ ನೇಮಕಗೊಂಡರು.
ಈ ಸಂದರ್ಭದಲ್ಲಿ ಎನ್.ಆರ್.ಗಜು ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸನ್ಮಾನಿತರು ತನ್ನ ಕಾಲಾವಧಿಯಲ್ಲಿ ವೈಜ್ಞಾನಿಕ ವಿಷಯ ಸಂಪದೀಕರಣಕ್ಕಾಗಿ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಸಹಕರಿಸಿದ್ದಕ್ಕೆ ಇಲಾಖೆ ಮತ್ತು ಶಿಕ್ಷಕವರ್ಗದವರನ್ನು ಅಭಿನಂದಿಸಿದರು. ವಿಜ್ಞಾನ ಸಂಘದ ಚಟುವಟಿಕೆಗಳನ್ನು ಮುನ್ನಡೆಸಲು ಮಾರ್ಗದರ್ಶನ ಸದಾ ಇರಬೇಕೆಂದು, ನೂತನ ಅಧ್ಯಕ್ಷರು ಕೋರಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪ್ರಭಾರ ಮುಖ್ಯಾಧ್ಯಾಪಕ ವಿಷ್ಣು ಭಟ್ಟ, ಸೆಕೆಂಡರಿ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್.ನಾಯ್ಕ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಗೀಸ್ ಸನ್ಮಾನಿತರ ಪರ ಅಭಿನಂದನಾ ನುಡಿಗಳನ್ನಾಡಿದರು.
ಪ್ರಾರಂಭದಲ್ಲಿ ಶಿಕ್ಷಕ ಭರತ್ ಭಟ್ಟ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಗಿಬ್ ಪ್ರೌಢಶಾಲೆಯ ಶಿಕ್ಷಕ ಎಸ್.ಎಸ್.ಪೈ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜನತಾ ವಿದ್ಯಾಲಯ ಮಿರ್ಜಾನಿನ ಶಿಕ್ಷಕಿ ಉಮಾ ಹೆಗಡೆ ನಿರೂಪಿಸಿದರೆ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಕೆ.ವಿ. ವಂದಿಸಿದರು. ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು, ಸುರೇಶ್ ಪೈ, ಪ್ರಶಾಂತ ಗಾವಡಿ ಮೊದಲಾದವರು ಸಹಕರಿಸಿದರು.