ಯಲ್ಲಾಪುರ: ತಾಲೂಕಿನ ಬಳಗಾರ ಕ್ರಾಸ್‍ನಲ್ಲಿರುವ ಆರತಿ ಬೈಲ್ ಸಮೀಪ ಪರವಾನಗಿ ಇಲ್ಲದ ನಾಡಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.
ಕುಡಿತದ ಚಟಕ್ಕೆ ದುಂದು ವೆಚ್ಚ ಮಾಡಬೇಡ ಎಂದು ಬುದ್ದಿ ಹೇಳಿದ ಮಗನ ಮೇಲೆ ತಂದೆ ಈ ಕೃತ್ಯ ನಡೆಸಿದ್ದಾನೆ. ಆರತಿಬೈಲ್ ನಿವಾಸಿ ರಾಮಾ ಪುಟ್ಟಾ ಸಿದ್ದಿ ಎಂಬಾತನೇ ತನ್ನ ಮಗನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ವ್ಯಕ್ತಿ.
ಈತನು ಅಡಿಕೆ ತೋಟದ ಫಸಲನ್ನು ಮಾರಿ ನಿತ್ಯವೂ ಕುಡಿದು ದುಂದು ವೆಚ್ಚ ಮಾಡುವುದನ್ನು ಆಕ್ಷೇಪಿಸಿದ ಮಗ ಮಂಜುನಾಥ ರಾಮಾ ಸಿದ್ದಿ ಹಾಗೂ ಮಂಜುನಾಥನ ತಾಯಿ ಬುದ್ದಿ ಹೇಳಿದ ಕಾರಣಕ್ಕೆ ಸಿಟ್ಟಿಗೆದ್ದ ಆರೋಪಿ ರಾಮಾ ಪುಟ್ಟ ಸಿದ್ದಿ ತೋಟದಲ್ಲಿ ಅನಧಿಕೃತವಾಗಿ ಇಟ್ಟ ನಾಡ ಬಂದೂಕು ಹಿಡಿದು ಮಗನಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾನೆ.
ಗುಂಡು ಹಾರಿಸಿದ ಪರಿಣಾಮ ಮಂಜುನಾಥನ ತೊಡೆಯ ಮೇಲ್ಭಾಗ ಮತ್ತು ಎಡಗೈ ಹೆಬ್ಬೆರಳಿಗೆ ಗಾಯಗಳಾಗಿವೆ. ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ರೇಣುಕಾ ಮಂಜುನಾಥ ಸಿದ್ದಿ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.