2020ನೇ ಸಾಲಿನ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಎರಡು ಹಂತದಲ್ಲಿ ಈ ಬಾರಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದೆ.
ಡಿಸೆಂಬರ್ 22ಕ್ಕೆ ಮೊದಲ ಹಂತದ ಮತದಾನ, ಡಿಸೆಂಬರ್ 27ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ಅಂತಿಮವಾಗಿ ಎರಡು ಹಂತದ ಚುನಾವಣೆಯ ಮತಏಣಿಕೆ ಡಿಸೆಂಬರ್ 30ರಂದು ನಡೆಯಲಿದೆ. ಇಂತಹ ಚುನಾವಣೆಗೆ ಸ್ಪರ್ಧಿಸಲು ಯೋಚಿಸಿದ್ದರೇ ಇದನ್ನು ಓದಿ.
ಗ್ರಾಮ ಪಂಚಾಯಿತಿ(Grama Panchayat) ಸಾರ್ವತ್ರಿಕ ಚುನಾವಣೆ-2020ಕ್ಕೆ ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭಗೊಂಡಿದೆ. ಮೊದಲ ಹಂತದ ಗ್ರಾಮಪಂಚಾಯಿತಿಯ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆಂಭಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ 11-12-2020 ಆಗಿದೆ. ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ 11-12-2020ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ 16-12-2020 ಆಗಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕೆಲ ದಾಖಲೆಗಳನ್ನು ಚುನಾವಣೆ ಸ್ಪರ್ಧಿಸುವಂತ ಅಭ್ಯರ್ಥಿ ಸಲ್ಲಿಸಬೇಕಾಗಿದೆ. ಒಂದು ವೇಳೆ ದಾಖಲೆಗಳನ್ನು ಸಲ್ಲಿಸದೇ ಇದ್ದಲ್ಲಿ ಮೊದಲ ಹಂತದ ಚುನಾವಣೆ ನಾಮಪತ್ರ ಪರಿಶೀಲನೆ 12-12-2020ರಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ 17-12-2020ರಂದು ನಡೆಯಲಿದ್ದು, ನಿಮ್ಮ ನಾಮಪತ್ರ ತಿರಸ್ಕೃತಗೊಳ್ಳಬಹುದು. ಈ ಹಿನ್ನಲೆಯಲ್ಲಿ ಈ ಕೆಳಕಂಡಂತೆ ದಾಖಲೆಗಳನ್ನು ಸಲ್ಲಿಸುವುದು ಅಭ್ಯರ್ಥಿ ಬಹುಮುಖ್ಯವಾಗಿದೆ.
ಸಲ್ಲಿಸಬೇಕಾದ ದಾಖಲೆಗಳು:
1. ಪತ್ರ-5ರ ನಾಮಪತ್ರ ( ಒಬ್ಬ ವ್ಯಕ್ತಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಬಹುದು)
2. ಜಾತಿ ಪ್ರಮಾಣ ಪತ್ರ
3. ಘೋಷಣಾ ಪತ್ರ (ರೂ.20ರ ಮುಖಬೆಲೆಯ 2 ಪ್ರತಿಗಳಲ್ಲಿ. ಒಂದು ಪ್ರತಿ ಝರಾಕ್ಸ್ ಅಫಿಡವಿಟ್)
4.ಠೇವಣಿ ಹಣ – ಸಾಮಾನ್ಯ ಸ್ಥಾನಕ್ಕೆ ರೂ.200, ಮೀಸಲಿರಿಸಿದ ಸ್ಥಾನಗಳಿಗೆ ರೂ.100 ( ಎಸ್ ಸಿ, ಎಸ್ಟಿ, ಬಿಸಿಎ, ಬಿಸಿಬಿ ಪ್ರವರ್ಗಗಳಿಗೆ ಮತ್ತು ಮಹಿಳೆಯರಿಗೆ)
5. ಮತಪತ್ರದಲ್ಲಿ ಮುದ್ರಿಸಬೇಕಾದ ಹೆಸರಿನ ಬಗ್ಗೆ ಲಿಖಿತ ಪತ್ರ
6. ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾದ ಹೆಚ್ಚುವರಿ ಮಾಹಿತಿ ( ಬಯೋಡಟಾ )
7. ಗ್ರಾಮ ಪಂಚಾಯಿತಿಯಿಂದ ಪಡೆದ ಬೇಬಾಕಿ ಪ್ರಮಾಣ ಪತ್ರ
8. ಅಭ್ಯರ್ಥಿಗಳ 3 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
9. ಇತ್ತೀಚಿನ ಮತದಾರರ ಗುರುತಿನ ಚೀಟಿ ಇಲ್ಲವೇ ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ
ಈ ಮೇಲ್ಕಂಡ ದಾಖಲೆಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ನಿಲ್ಲುವಂತ ಅಭ್ಯರ್ಥಿಯು ನಾಮಪತ್ರದೊಂದಿಗೆ ಸಲ್ಲಿಸಬೇಕಾಗಿದೆ. ಹೀಗೆ ಸಲ್ಲಿಸಿದಾಗ ಮಾತ್ರವೇ ನಾಮಪತ್ರ ಊರ್ಜಿತವಾಗುತ್ತದೆ. ಇಲ್ಲವಾದಲ್ಲಿ ನಾಮಪತ್ರಗಳ ಪರಿಶೀಲನೆಯಂದು ಅಭ್ಯರ್ಥಿ ಸಲ್ಲಿಸಿದ್ದಂತ ನಾಮಪತ್ರ ತಿರಸ್ಕೃತಗೊಳ್ಳಲಿದೆ.