ಹೊನ್ನಾವರ : ಹಿರಿಯ ಯಕ್ಷಗಾನ ಕಲಾವಿದ ಹಡಿನಬಾಳು ಶ್ರೀಪಾದ ಹೆಗಡೆಯವರು ಇಂದು ಕೊನೆಯುಸಿರೆಳೆದಿದ್ದು, ಅವರ ಕುಟುಂಬದ ಆಪ್ತ ವಲಯದವರು ಈ ವಿಷಯವನ್ನು ದೃಢೀಕರಿಸಿದ್ದಾರೆ.
ಇವರು ಕಳೆದ ವರ್ಷ ಆಕಸ್ಮಿಕವಾಗಿ ಬೈಕ್ ಅಪಘಾತಕ್ಕೊಳಗಾಗಿ ಮಿದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
1953 ರಂದು ಜನಿಸಿದ ಶ್ರೀಪಾದ ಹೆಗಡೆ ಎಸ್‍ಎಸ್‍ಎಲ್‍ಸಿ ವರೆಗೆ ಶಿಕ್ಷಣ ಪಡೆದಿದ್ದರು. 1976, 77 ರಲ್ಲಿ ಗುಂಡಬಾಳಾ ಮುಖ್ಯಪ್ರಾಣ ದೇವರ ಸನ್ನಿಧಿಯಲ್ಲಿ ನಡೆದ ಹರಿಕೆ ಬಯಲಾಟದ ವೇಳೆ ಯಕ್ಷಗಾನಕ್ಕೆ ಪ್ರವೇಶಿಸಿದ್ದರು. ಬಳಿಕ ಅಮೃತೇಶ್ವರಿ, ಹಿರೇಮಹಾಲಿಂಗೇಶ್ವರ ಮೇಳ, ಪಂಚಲಿಂಗೇಶ್ವರ ಮೇಳ ಶಿರಸಿ, ಪೆರ್ಡೂರು, ಬಚ್ಚಗಾರು, ರಾಮನಾಥೇಶ್ವರ, ಮಂದಾರ್ತಿ, ಶಿರಸಿ ಮಾರಿಕಾಂಬ, ಸಾಲಿಗ್ರಾಮ, ಇಡಗುಂಜಿ, ನೀಲಾವರ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕೊಂಡಾಕುಳಿಯಲ್ಲಿ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಪ್ರಮುಖ ರಾಜ ವೇಷಗಳು, ಗಂಭೀರ ಪಾತ್ರಗಳು ಹಾಗೂ ಹಾಸ್ಯಪಾತ್ರಗಳಾದ ಬ್ರಾಹ್ಮಣ, ಬಾಗಿಲದೂತ, ವನಪಾಲ, ಅಜ್ಜಿ, ಮಂಥರೆ, ಕಪ್ಪದದೂತ, ಕಾಶಿಮಾಣಿ, ಸ್ತ್ರೀಪಾತ್ರದಲ್ಲಿ ಚಿತ್ರಾಂಗದೆ, ಅಂಬೆ, ಬಣ್ಣದ ವೇಷದಲ್ಲಿ ಘೋರ ಶೂರ್ಪನಖಿ, ಹಾಗೂ ಇನ್ನಿತರ ಪ್ರಮುಖ ಪಾತ್ರಗಳಲ್ಲಿಯೂ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು.
ಎಲ್ಲ ಪಾತ್ರಕ್ಕೂ ಸೈ ಎನಿಸಿಕೊಂಡ ವೀರಳಾತೀವಿರಳ ಯಕ್ಷಗಾನ ಕಲಾವಿದರಲ್ಲಿ ಹಡಿನಬಾಳ ಶ್ರೀಪಾದ ಹೆಗಡೆಯವರು ಪ್ರಮುಖರು. ಭಿನ್ನವಿಭಿನ್ನ ಪಾತ್ರಗಳನ್ನು ಮಾಡಿ ಯಕ್ಷರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಖ್ಯಾತ ಈ ಕಲಾವಿದರಾಗಿದ್ದರು.