ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ಧ ಹೆಬಳೆಯ ಶ್ರೀ ಶೇಡಬರಿ ಜಟಗಾ ಮಹಾಸತಿ ದೇವಸ್ಥಾನದ ಇಪ್ಪತ್ತೊಂದನೆಯ ವರ್ಷದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಸಾವಿರಾರು ಭಕ್ತಾದಿಗಳು ಶ್ರೀ ದೇವರುಗಳಿಗೆ ತಮ್ಮ ತಮ್ಮ ಇಷ್ಟದ ಸೇವೆಗಳನ್ನು ಸಲ್ಲಿಸಿದರು.ಸ್ಥಳ ಸಾನಿಧ್ಯ ಪ್ರಮುಖ ದೇವರುಗಳಾದ ಜಟಗಾ,ಮಹಾಸತಿ,ಪ್ರಧಾನ ಬ್ರಹ್ಮ ದೇವರುಗಳು ಹೂವಿನಿಂದ ಅಲಂಕೃತಗೊಂಡುದುದಲ್ಲದೇ ಶ್ರೀ ಜಟಗಾ ಮತ್ತು ಮಹಾಸತಿ ದೇವರುಗಳು ವಿಶೇಷ ದಿನಗಳಂದು ಧಾರಣೆ ಮಾಡುವ ಬೆಳ್ಳಿ ಹಾಗೂ ಬಂಗಾರದ ಒಡವೆಗಳು,ಸೀರೆ,ಸೊಂಟಪಟ್ಟಿಗಳಿಂದ ಶೋಭಿಸುತ್ತಿದ್ದವು. ಪ್ರಧಾನ, ಬ್ರಹ್ಮ ಹಾಗೂ ಪರಿವಾರ ದೇವರುಗಳು ಬಗೆಬಗೆಯ ಹೂವುಗಳಿಂದ ಅಲಂಕೃತಗೊಂಡಿದ್ದವು.
ಮಧ್ಯಾಹ್ನ ದೇವಸ್ಥಾನದ ಪದ್ಧತಿಯಂತೆ ಮಹಾಪೂಜೆಗೂ ಮೊದಲು ಪರಿವಾರ ದೇವರುಗಳಿಗೆ ಕಾಯಿ ಒಡೆದು ಧೂಪನೆಣೆ ಹಾಕಿದ ನಂತರ ಪ್ರಮುಖ ದೇವರುಗಳಿಗೆ ಮಹಾಪೂಜೆ ನಡೆಸಲಾಯಿತು.ನಂತರ ನೆರೆದಿದ್ದ ಭಕ್ತರೆಲ್ಲರಿಗೂ ಪ್ರಸಾದ ವಿತರಿಸಲಾಯಿತು.
ಸಾಯಂಕಾಲ ಸೂರ್ಯಾಸ್ತಮಾನದ ಬಳಿಕ ಶಿರಾಲಿಯ ಚಿತ್ರಾಪುರ ಸಂಸ್ಥಾನದ ಪ್ರತಿನಿಧಿಗಳು ಶ್ರೀ ಜಟಗಾ ದೇವರ ಮುಂದೆ ಇಡಲಾದ ಬೃಹತ್ ತುಪ್ಪದ ದೀಪ ಬೆಳಗುವ ಮೂಲಕ ದೀಪಾರಾಧನೆಯ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಬಂದಂತಹ ಎಲ್ಲ ಭಕ್ತಾದಿಗಳೂ ಕೂಡ ದೇವಸ್ಥಾನದ ಪ್ರಾಂಗಣ ಹಾಗೂ ಹೊರಗಡೆ ಇಟ್ಟಿರುವ ಹಣತೆಗಳನ್ನು ಬೆಳಗಿಸುವ ಮೂಲಕ ತಮ್ಮಲ್ಲಿರುವ ಅಜ್ಞಾನದ ಅಂಧಕಾರವ ತೊಲಗಿಸಿ ಸುಜ್ಞಾನದ ಬೆಳಕಿನ ಸಂಕೇತದ ಧನ್ಯತಾಭಾವಕ್ಕೆ ಒಳಗಾದರು. ಎಲ್ಲಿ ನೋಡಿದರೂ ಹಣತೆಯ ದೀಪಗಳ ಸಾಲುಸಾಲು…ದೇವಸ್ಥಾನದ ಮೇಲೆ ಹಾಗೂ ಹೊರಭಾಗಕ್ಕೆ ಅಲಂಕರಿಸಿರುವ ವಿದ್ಯುತ್ ದೀಪಗಳಿಗೆ ತಾವೂ ಕೂಡ ಕಡಿಮೆಯಿಲ್ಲವೆನ್ನುವಂತೆ ಮಣ್ಣಿನ ಹಣತೆಯ ದೀಪಗಳು ಮುಂಜಾನೆಯವರೆಗೂ ಬೆಳಗುತ್ತಲೇ ಇದ್ದವು.
ವರ್ಷಂಪ್ರತಿಯಂತೆ ಸ್ಥಳೀಯ ಯುವಕ ಯುವತಿಯರು ದೇವಸ್ಥಾನದ ಪ್ರಾಂಗಣದಲ್ಲಿ ರಚಿಸಿರುವ ಬೃಹತ್ತಾದ ನಂದಿಯ ರಂಗೋಲಿ ಬಂದಂತಹ ಎಲ್ಲ ಭಕ್ತಾದಿಗಳನ್ನು ಆಕರ್ಷಿಸಿ ಮನಸೂರೆಗೊಳ್ಳುತ್ತಿತ್ತು. ಸಂಪೂರ್ಣ ಶೇಡಬರಿ ಗುಡ್ಡವೇ ಹಣತೆಗಳ ಬೆಳಕಿನಲ್ಲಿ ಜಗಮಗಿಸುತ್ತಿದ್ದವು.
ರಾತ್ರಿ ಊರಿನ ಭಕ್ತಾದಿಗಳಿಂದ ಭಜನಾಕಾರ್ಯಕ್ರಮ ನಡೆಯಿತು.
ಈ ಎಲ್ಲ ಕಾರ್ಯಕ್ರಮದಲ್ಲೂ ದೇವಸ್ಥಾನದ ಆಡಳಿತ ಮಂಡಳಿಯವರು,ದೀಪೋತ್ಸವ ಸಮಿತಿಯವರು ಹಾಗೂ ಊರಿನ ಅನೇಕ ಭಕ್ತಾದಿಗಳು ಹಾಜರಿದ್ದರು.
ಚಿತ್ರ-ವರದಿ: ರಾಮ ಹೆಬಳೆ
ಮೊಬೈಲ್: ೯೯೬೪೮೮೪೪೯೪