ಕುಮಟಾ: ಇದೇ ಬರುವ ಮಂಗಳವಾರ ದಿನಾಂಕ 22 ರಂದು ಜರುಗಲಿರುವ ಗ್ರಾಮ ಪಂಚಾಯತ ಚುನಾವಣಾ ಕಣ ಎಲ್ಲಡೆ ರಂಗೇರುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಹೆಚ್ಚಿನ ಕಡೆ ಸುಶಿಕ್ಷಿತರು ಸ್ಪರ್ಧಿಸುತ್ತಿರುವುದು ಗಮನಾರ್ಹ ಬದಲಾವಣೆಯಾಗಿದೆ. ಇದಕ್ಕೆ ಪೂರಕವಾಗಿ ಕುಮಟಾ ತಾಲೂಕಿನ ಬಾಡ ಗ್ರಾಮ ಪಂಚಾಯತದ ಹುಬ್ಬಣಗೇರಿಯ ಬಾಡ ಹಿಣಿ ವಾರ್ಡಿನ ಸಾಮಾನ್ಯ ಪುರುಷ ಮೀಸಲು ಕ್ಷೇತ್ರಕ್ಕೆ ಇಂಜಿನಿಯರಿಂಗ್ ಪದವೀಧರರಾದ ಲಕ್ಷ್ಮಿನಾರಾಯಣ ನಾಯಕರು ಸ್ಪರ್ಧಿಸಿ ಚುನಾವಣಾ ಕಣ ಗರಿಗೆದರುವಂತೆ ಮಾಡಿದ್ದಾರೆ.
ಜನರಿಗೆ ಗಿರೀಶ ನಾಯಕ ಎಂದೇ ಚಿರಪರಿಚಿತರಾದ ಇವರು ಈ ಭಾಗದ ಪ್ರತಿಷ್ಠಿತ ನಾಯಕ ಕುಟುಂಬದವರಾಗಿದ್ದು, ಇವರ ಕುಟುಂಬ ಮೊದಲಿನಿಂದಲೂ ರೈತಪರವಾಗಿದ್ದು, ಈ ಹಿಂದೆ ಇವರ ತಂದೆಯವರಾದ ದಿವಂಗತ ಹನುಮಂತ ನಾಯಕರು ಉಪ್ಪಿನ ಮೇಲೆ ವಿಧಿಸಿದ್ದ ತೆರಿಗೆಯನ್ನು ಮುಕ್ತಗೊಳಿಸಲು ಹೋರಾಡಿ ಜೈಲುವಾಸವನ್ನು ಅನುಭವಿಸಿದ್ದನ್ನು ಇಂದಿಗೂ ಈ ಭಾಗದ ಹಿರಿಯರು ಸ್ಮರಿಸಿಕೊಳ್ಳುತ್ತಾರೆ. ಇವರ ಕುಟುಂಬದ ಗುಣಮಟ್ಟದ ಉಪ್ಪಿನ ಉದ್ಯಮ ಎಲ್ಲರಿಗೂ ಚಿರಪರಿಚಿತ. ಈ ಭಾಗದ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಇವರು ನಡೆಸಲಾಗುತ್ತಿರುವ ರೈಸ್ ಮಿಲ್ ಇಂದಿಗೂ ಪ್ರಸಿದ್ಧ.
ವಾಸ್ತು ತಜ್ಞರಾದ ಇವರು ಕಟ್ಟಡ ವಿನ್ಯಾಸದಲ್ಲಿ ಎತ್ತಿದ ಕೈ. ಮಿತಭಾಷಿ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಇವರು ಉತ್ತರಕನ್ನಡದ ಜ್ವಲಂತ ಸಮಸ್ಯೆಯಾದ ಇ-ಸ್ವತ್ತು ಕಾಯಿದೆಯ ಮಾರ್ಪಾಟಿನ ಬಗ್ಗೆ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪಾರದರ್ಶಕ ಚುನಾವಣೆಯು ಇವರ ಕನಸಾಗಿದ್ದು, ಗ್ರಾಮಮಟ್ಟದಲ್ಲಿ ಇವರು ಹೊತ್ತ ಕನಸು ಸಾಕಾರಗೊಳ್ಳಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದಾರೆ. ಗಿರೀಶ ನಾಯಕರಂತ ಸರಳ ಸುಶಿಕ್ಷಿತ ಸಜ್ಜನ ವ್ಯಕ್ತಿಗೆ ಬಾಡ ಹಿಣಿ ಭಾಗದ ಮತದಾರ ಪ್ರಭುಗಳು ಅವಕಾಶ ನೀಡಲಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.