ಭಟ್ಕಳ : ನವಮುರ್ಡೇಶ್ವರದ ನಿರ್ಮಾಪಕರೆಂದೇ ಪ್ರಸಿದ್ಧರಾಗಿದ್ದ, ಕರ್ಮಯೋಗಿ, ಆರ್ ಎನ್ ಎಸ್ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷ ಆರ್ ಎನ್ ಶೆಟ್ಟಿ ಯವರು ತಮ್ಮ ೯೨ನೇವಯಸ್ಸಿನಲ್ಲಿ ಇಂದು(ಗುರುವಾರ) ಬೆಳಗಿನ ಜಾವ ೩:೩೦ಕ್ಕೆ ಹೃದಯಾಘಾತ ದಿಂದ ಇಹಲೋಕ ತ್ಯಜಿಸಿದ್ದಾರೆ.
ಡಾ. ರಾಮ ನಾಗಪ್ಪ ಶೆಟ್ಟಿ ಅವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ 1928ರ ಆಗಸ್ಟ್ 15ರಂದು ಜನಿಸಿದ್ದರು. ಮುರುಡೇಶ್ವರ ದೇವಸ್ಥಾನದ ಆನುವಂಶಿಕ ಆಡಳಿತಾಧಿಯಾಗಿ ಈ ಸ್ಥಳವನ್ನು ಪ್ರೇಕ್ಷಣೀಯ ಕ್ಷೇತ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಅವರದು. ಮುರುಡೇಶ್ವರದ ಸಮುದ್ರ ತೀರದಲ್ಲಿ 123 ಅಡಿ ಎತ್ತರದ ಶಿವನ ಪ್ರತಿಮೆಯನ್ನು ಸ್ಥಾಪಿಸಿದ್ದರು.
ಆರ್ ಎನ್ ಶೆಟ್ಟಿ ಅವರು ಉದ್ಯಮಿಯಾಗಿ ಬಹುದೊಡ್ಡ ಹೆಸರು ಮಾಡಿದ್ದರು. 1967ರಲ್ಲಿ ಪಾಲುದಾರ ಕಂಪೆನಿಯಾದ ಆರ್ ಎನ್ ಶೆಟ್ಟಿ ಆಂಡ್ ಕಂಪೆನಿ ಆರಂಭಿಸಿದ್ದರು. ಕಂಪೆನಿ ಮೂಲಕ ಅನೇಕ ಸೇತುವೆ, ಅಣೆಕಟ್ಟುಗಳು, ಕಟ್ಟಡಗಳ ನಿರ್ಮಾಣ ಕಾರ್ಯ ಮಾಡಿದ್ದರು.
ಕರ್ನಾಟಕದ ಅಭಿವೃದ್ಧಿಗೆ ಅವರ ಬಹುಮುಖೀ ಕೊಡುಗೆ ಸದಾ ಸ್ಮರಣೀಯವಾದುದು. ಮುರ್ಡೇಶ್ವರವನ್ನು ಜಾಗತಿಕ ಪ್ರವಾಸಿ ತಾಣವಾಗಿ ಬಿಂಬಿಸುವಲ್ಲಿ ಇವರ ಕೊಡುಗೆ ಅನನ್ಯವಾದುದು.
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸತ್ವಾಧಾರ ಬಳಗ ಬಯಸುತ್ತದೆ. ಇವರ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಇವರು ಇಹಲೋಕ ತ್ಯಜಿಸಿದ ವಿಷಯ ತಿಳಿದ ಗಣ್ಯರು ಸಂತಾಪ ಸೂಚಿಸಿದ್ದಾರೆ.